ಕಂಪ್ಲಿ: ತಾಲೂಕಿನ ವಿವಿಧೆಡೆ ಮೇ ಕೊನೆಯ ವಾರದಲ್ಲಿ ಸುರಿದ ಮಳೆಯಿಂದಾಗಿ ಭೂಮಿ ಹಸಿಯಾಗಿದ್ದು, ರೈತರು ಬಿತ್ತನೆ ಬೀಜ ಖರೀದಿಸಲು ಮುಂದಾಗಿದ್ದಾರೆ.
ತಾಲೂಕಿನಲ್ಲಿ 26,918ಹೆಕ್ಟೇರ್ ಸಾಗುವಳಿ ಪ್ರದೇಶದ ಪೈಕಿ 13,650 ಹೆಕ್ಟೇರ್‌ನಲ್ಲಿ ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲಾಗಿತ್ತು. ತಾಲೂಕಿನ ಅರ್ಧಕ್ಕಿಂತಲೂ ಹೆಚ್ಚಿನ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಉಳಿದ ಸಾಗುವಳಿ ಪ್ರದೇಶದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ, ಉಳಿದ ಭಾಗದಲ್ಲಿ ಬಾಳೆ, ಕಬ್ಬು, ತೊಗರಿ, ನವಣೆ, ಮೆಕ್ಕೆಜೋಳ ಬೆಳೆಯಲಾಗುತ್ತದೆ.
ಮುಂಗಾರು ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜ ಖರೀದಿಗೆ ರೈತರು ಮುಂದಾಗಿದ್ದಾರೆ. ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ 158.85 ಕ್ವಿಂಟಾಲ್ ಬಿತ್ತನೆ ಬೀಜ ಬಂದಿದ್ದು, 53.05 ಕ್ವಿಂಟಾಲ್ ಬೀಜ ಮಾರಾಟವಾಗಿದೆ. ಕೇಂದ್ರಕ್ಕೆ 35 ಕ್ವಿಂಟಾಲ್ ಬಿಪಿಟಿ 5204 ತಳಿಯ ಭತ್ತ ಬಿತ್ತನೆ ಬೀಜದ ಪೈಕಿ 10 ಕ್ವಿಂಟಾಲ್ ಮಾರಾಟವಾಗಿದೆ.
ಎಂ.ಟಿ.ಯು 1010 ತಳಿಯ ಭತ್ತ 72.25 ಕ್ವಿಂಟಾಲ್ ಪೈಕಿ 37.25 ಕ್ವಿಂಟಾಲ್ ಮಾರಾಟವಾಗಿದೆ. ಆರ್.ಎನ್.ಆರ್ 15048 ತಳಿಯ ಭತ್ತದ 25 ಕ್ವಿಂಟಾಲ್ ಬಿತ್ತನೆ ಬೀಜ ಇನ್ನೂ ಯಾರೂ ಖರೀದಿಸಿಲ್ಲ. ಡಿ.ಎಚ್.ಎಫ್.ಟಿ.ಟಿ-109-3 ತಳಿಯ ನವಣೆ 1.8 ಕ್ವಿಂಟಾಲ್ ಪೈಕಿ 0.04 ಕ್ವಿಂಟಾಲ್ ಮಾರಾಟವಾಗಿದೆ. ಟಿ.ಎಸ್-3 ಆರ್ ತಳಿಯ ತೊಗರಿ 4.8 ಕ್ವಿಂಟಾಲ್ ಪೈಕಿ 0.6 ಕ್ವಿಂಟಾಲ್ ಮಾರಾಟಗೊಂಡಿದೆ. ಎನ್.ಕೆ.6240 ತಳಿಯ ಮೆಕ್ಕೆಜೋಳ 20 ಕ್ವಿಂಟಾಲ್ ಪೈಕಿ 5.16 ಕ್ವಿಂಟಾಲ್ ಮಾರಾಟವಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಟಿ.ಜ್ಯೋತಿ ತಿಳಿಸಿದ್ದಾರೆ.
ರೈತರು ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರಗಳನ್ನು ಖರೀದಿಸಿದಲ್ಲಿ ಕಡ್ಡಾಯವಾಗಿ ಅಧಿಕೃತ ಬಿಲ್ ಪಡೆದುಕೊಂಡು ಕಾಯ್ದಿರಿಸಿಕೊಳ್ಳಬೇಕು. ಅಧಿಕೃತ ಮಾರಾಟಗಾರರ ಬಳಿಯೇ ಬಿತ್ತನೆಬೀಜ, ಕೃಷಿ ಪರಿಕರಗಳನ್ನು ಕೊಳ್ಳಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ತರಿಸಿಕೊಡಲಾಗುವುದು. ಕೆ.ಸೋಮಶೇಖರ ಕೃಷಿ ಅಧಿಕಾರಿ, ಕಂಪ್ಲಿ ಕಳೆದ ಒಂಬತ್ತು ದಿನಗಳಿಂದ ಮಳೆಯಾಗಿಲ್ಲ. ಸಕಾಲದಲ್ಲಿ ಮಳೆಯಾದಲ್ಲಿ ರೈತರಿಗೆ ವರದಾನವಾಗಲಿದೆ. ರೈತರ ಅನುಕೂಲಕ್ಕಾಗಿ ಸರ್ಕಾರ ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ಉಚಿತವಾಗಿ ಒದಗಿಸಬೇಕು. ಕೊಟ್ಟೂರು ರಮೇಶ ರೈತಸಂಘದ ತಾಲೂಕು ಕಾರ್ಯಾಧ್ಯಕ್ಷ, ಕಂಪ್ಲಿ