ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ರಭಸವಾಗಿ ಹರಿಯುತ್ತಿರುವ ಘಟಪ್ರಭೆ ನದಿಯಲ್ಲಿ ಪಂಪ್‌ಸೆಟ್ ತರಲು ತೆರಳುತ್ತಿರುವ ರೈತರು. 
ಜಿಲ್ಲೆ

ಪಂಪ್‌ಸೆಟ್ ತರಲು ನೀರಿಗೆ ಇಳಿದ ರೈತರು

ಮುಧೋಳ: ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿರುವ ವೇಳೆಯೇ ರೈತರು ರಭಸವಾಗಿ ಹರಿಯುವ ಘಟಪ್ರಭೆಯಲ್ಲಿ ಇಳಿದು ಪಂಪ್‌ಸೆಟ್ ತರಲು ತೆರಳಿದ ಘಟನೆ ಸಮೀಪದ ಮಿರ್ಜಿ ಗ್ರಾಮದಲ್ಲಿ ನಡೆಯಿತು.

ಮಿರ್ಜಿ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಅವಲೋಕಿಸುವ ಸಂದರ್ಭದಲ್ಲಿ ಸ್ಥಳೀಯ ರೈತರು ನೀರಿನಲ್ಲಿದ್ದ ಪಂಪ್‌ಸೆಟ್‌ಗಳನ್ನು ತರಲು ಹೊರಟಿದ್ದರು. ಅದನ್ನು ಗಮನಿಸಿದ ಸಚಿವರು, ದಯವಿಟ್ಟು ನದಿಗೆ ಇಳಿಯಬೇಡಿ ಎಂದು ರೈತರಿಗೆ ಮನವಿ ಮಾಡಿಕೊಂಡರು. ಜೊತೆಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಇತರರು ಇದ್ದರು. ಈಗಾಗಲೇ ಮುಧೋಳ ಸಿದ್ಧೇಶ್ವರ, ಢವಳೇಶ್ವರ, ಮಿರ್ಜಿ, ಜಾಲಿಬೇರ, ಜೀರಗಾಳ, ಮಾಚಕನೂರ, ಆಲಗುಂಡಿ ಸೇರಿ ಎಲ್ಲ ಬ್ರಿಜ್ ಕಂ ಬ್ಯಾರೇಜ್ ಮುಳುಗಿದ್ದು, ಯಾದವಾಡ-ಮುಧೋಳ ರಸ್ತೆ ಮೇಲೆ ನೀರು ಹರಿಯಲು ಕ್ಷಣಗಣನೆ ಆರಂಭವಾಗಿದೆ. ಮಿರ್ಜಿಯಲ್ಲಿ 20 ಕುಟುಂಬಗಳಿಗೆ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ನದಿ ಪಾತ್ರದ ಎಲ್ಲ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ.

ಕಬ್ಬಿಗೆ ನುಗ್ಗಿದ ನೀರು

ನದಿ ದಡದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರವಾಹದ ಹೊಡೆತಕ್ಕೆ ಸಿಕ್ಕು ಬೆಳೆ ನಾಶವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡರು.

ಸೇತುವೆ ವೀಕ್ಷಣೆ ಮಾಡಿದ ಸಚಿವರು

ಇದಕ್ಕೂ ಮೊದಲು ಮುಧೋಳ-ಯಾದವಾಡ ಸೇತುವೆ ಬಳಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿ ಪ್ರವಾಹಕ್ಕೆ ಯುದ್ಧೋಪಾಯದ ರೀತಿಯಲ್ಲಿ ಸಜ್ಜಾಗಿ ಅವಶ್ಯಕತೆ ಇರುವಲ್ಲಿ ಕಾಳಜಿ ಕೇಂದ್ರ ಆರಂಭ ಮಾಡಿ. ನದಿ ದಡದಲ್ಲಿ ಜನ ಜಾನುವಾರು ಹೋಗದಂತೆ ಎಚ್ಚರಿಕೆ ವಹಿಸಿ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು.

ಉದಯಸಿಂಗ್ ಪಡತಾರೆ, ಅಶೋಕ ಕಿವಡಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ವಿನೋದ ಹತ್ತಳ್ಳಿ ಇತರರು ಇದ್ದರು.

ಪ್ರವಾಹ ಮುನ್ನೆಚ್ಚರಿಕೆ

ಬೆಳಗಾವಿ ಹಾಗೂ ಮಹಾರಾಷ್ಟ್ರದ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಳೆ ಪರಿಣಾಮ ಎಲ್ಲ ಜಲಾಶಯ ಭರ್ತಿಯಾಗಿದ್ದು, ವಿವಿಧ ಜಲಾಶಯದಿಂದ ನಿತ್ಯವೂ ಎಪ್ಪತ್ತು ಸಾವಿರಕ್ಕೂ ಅಧಿಕ ನೀರನ್ನು ಘಟಪ್ರಭಾ ನದಿಗೆ ಬಿಡಲಾಗುತ್ತಿದೆ. ತಾಲೂಕಿನ ರೈತರು ಹಷರ್ಗೊಂಡರೆ, ಪ್ರವಾಹಕ್ಕೆ ಒಳಗಾಗುವ ಗ್ರಾಮಗಳ ರೈತರು ಆತಂಕಗೊಂಡಿದ್ದಾರೆ. ಇದೇ ರೀತಿ ಎರಡು ದಿನ ಮಳೆ ಮುಂದುವರಿದರೆ ಹಾಗೂ ಜಲಾಶಯದ ನೀರು ಹೆಚ್ಚಾದರೆ ಮುಧೋಳ-ಯಾದವಾಡ ಹಾಗೂ ಚಿಚಖಂಡಿ ಸೇತುವೆ ಮೇಲೆ ನೀರು ಬಂದು ಹಲವಾರು ಗ್ರಾಮಗಳ ಸಂಪರ್ಕ ಸ್ಥಗಿತವಾಗಲಿದೆ.

ಮಿರ್ಜಿ ಗ್ರಾಮದಲ್ಲಿ ನದಿ ದಡದ ರೈತರು ಪಂಪ್‌ಸೆಟ್ ತರಲು ನೀರನ್ನು ಲೆಕ್ಕಿಸದೆ ನದಿಗೆ ಇಳಿಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ನದಿಯಲ್ಲಿನ ಪಂಪ್‌ಸೆಟ್ ತರಲು ರೈತರು ಹೋಗದಂತೆ ಅಧಿಕಾರಿಗಳು ತಾಕೀತು ಮಾಡಬೇಕು.
ಆರ್.ಬಿ.ತಿಮ್ಮಾಪೂರ, ಅಬಕಾರಿ ಸಚಿವರು