ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರದಿಂದ ಧರಣಿ ಆರಂಭಿಸಿವೆ.
ಸರ್‌ಎಂವಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ಆರಂಭಿಸಿರುವ ಸಂಘಟನೆ ಕಾರ್ಯಕರ್ತರು, ತ.ನಾಡಿಗೆ ಹರಿಸುತ್ತಿರುವ ನೀರನ್ನು ರಾಜ್ಯ ಸರ್ಕಾರ ತಕ್ಷಣ ನಿಲುಗಡೆ ಮಾಡಬೇಕೆಂದು ಆಗ್ರಹಿಸಿದರು. ಕಾವೇರಿ ನಮ್ಮದು, ರಕ್ತ ಕೊಟ್ಟರೂ ನೀರು ಬಿಡೆವು ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತ.ನಾಡು ಒತ್ತಡ ತಂತ್ರದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಆದೇಶ ಮಾಡಿರುವುದು ಅವ್ಯೆಜ್ಞಾನಿಕ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬಾರದು. ಈಗಾಗಲೇ ಸತತವಾಗಿ ನೀರು ಹರಿಸಿದ ಪರಿಣಾಮ ಕೃಷ್ಣರಾಜಸಾಗರ ಜಲಾಶಯದಲ್ಲಿ 113 ಅಡಿ ಇದ್ದ ನೀರು ಈಗ 100 ಅಡಿಗೆ ಕುಸಿದಿದೆ. ಪರಿಣಾಮ ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಇಲ್ಲದಂತಾಗಿದೆ. ಪ್ರಾಧಿಕಾರದ ಆದೇಶದಂತೆ ಮತ್ತೆ ತ.ನಾಡಿಗೆ ನೀರು ಹರಿಸುತ್ತಿರುವುದರಿಂದ ಕುಡಿಯುವ ನೀರು ಕೂಡ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಉಪಾಧ್ಯಕ್ಷರೂ ಆದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಜಿ.ಬಿ. ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಬೇಕ್ರಿ ರಮೇಶ್, ಗುರುಪ್ರಸಾದ್ ಕೆರಗೋಡು, ಪ್ರಶಾಂತಬಾಬು, ಕೆ.ಬೋರಯ್ಯ, ಅಂಬುಜಮ್ಮ, ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ, ಅಂದಾನಿ ಸೋಮನಹಳ್ಳಿ, ಕನ್ನಡ ಸೇನೆ ಮಂಜುನಾಥ್, ಜಯ ಕರ್ನಾಟಕ ಯೋಗಣ್ಣ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಎಂ.ಎಲ್.ತುಳಸೀಧರ್, ಸಿ.ಟಿ.ಮಂಜುನಾಥ್, ಸಿದ್ದರಾಜುಗೌಡ, ಶ್ರೀಧರ್, ಇಂಡುವಾಳು ಬಸವರಾಜು, ಭಜರಂಗಸೇನೆ ಬಿ.ಮಂಜುನಾಥ್, ಹರ್ಷ, ವಸಂತ್ ಇತರರಿದ್ದರು.