ಚಿಕ್ಕಬಳ್ಳಾಪುರ: ಫಸಲ್ ಬಿಮಾ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯದ ರೈತರಿಗೆ 13,551 ಕೋಟಿ ರೂ. ಕೃಷಿ ಸಮ್ಮಾನ್ ಯೋಜನೆಯಡಿ 17,102 ಕೋಟಿ ರೂ. ನೀಡಿದೆ.
ಸಂಸದ ಡಾ. ಕೆ. ಸುಧಾಕರ್ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಭಗೀರಥ ಚೌಧರಿ ಈ ಮಾಹಿತಿ ನೀಡಿದ್ದಾರೆ.
ಬೆಳೆ ನಷ್ಟದ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ 2016ರಲ್ಲಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿದೆ. ಮುಂಗಾರು ಹಾಗೂ ಹಿಂಗಾರು ಅವಧಿ ಸೇರಿ ರಾಜ್ಯದ ಅನೇಕ ರೈತರು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮತ್ತಿತರ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿದ್ದಾರೆ.
2023-24ನೇ ಸಾಲಿನ ಮುಂಗಾರು ಅವಧಿಯಲ್ಲಿ 1,867.11 ಕೋಟಿ ರೂ. ಹಾಗೂ ಹಿಂಗಾರು ಅವಧಿಯಲ್ಲಿ 154.45 ಕೋಟಿ ರೂ. ಬೆಳೆ ನಷ್ಟ ಪರಿಹಾರ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,021.56 ಕೋಟಿ ರೂ. ಬೆಳೆ ನಷ್ಟ ಪರಿಹಾರ ರೈತರಿಗೆ ಸಿಕ್ಕಿದೆ. 2016-17ನೇ ಸಾಲಿನಲ್ಲಿ ಇದುವರೆಗೆ 13,551.70 ಕೋಟಿ ರೂ. ನಷ್ಟ ಪರಿಹಾರವನ್ನು ರೈತರು ಪಡೆದಿದ್ದಾರೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯು 2018-19ರಿಂದ ಅನುಷ್ಠಾನಗೊಂಡಿದ್ದು ಇದುವರೆಗೆ 18 ಕಂತುಗಳಲ್ಲಿ ರಾಜ್ಯದ ಸರಾಸರಿ 50 ಲಕ್ಷ ರೈತ ಕುಟುಂಬಗಳಿಗೆ 17,102.79 ಕೋಟಿ ರೂ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. 2024-25ನೇ ಸಾಲಿನ ಏಪ್ರಿಲ್-ಜುಲೈ ಅವಧಿಯಲ್ಲಿ 17ನೇ ಕಂತಿನಲ್ಲಿ 43,04,818 ರೈತರಿಗೆ 958.26 ಕೋಟಿ ರೂ. ಹಾಗೂ ಆಗಸ್ಟ್-ನವೆಂಬರ್ ಅವಧಿಯಲ್ಲಿ 18ನೇ ಕಂತಿನಲ್ಲಿ 43,47,737 ರೈತರಿಗೆ 941.76 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಸಚಿವರು ಸಂಸದರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ರೈತರ ಆರ್ಥಿಕ ಸ್ಥಿತಿಯನ್ನು ಸಬಲೀಕರಣ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರೈತರ ಕಲ್ಯಾಣವೇ ಎನ್‌ಡಿಎ ಸರ್ಕಾರದ ಆದ್ಯತೆಯಾಗಿದೆ. ಇದಕ್ಕೆ ಕಿಸಾನ್ ಸಮ್ಮಾನ್ ಮತ್ತು ಪಿಎಂ ಫಸಲ್ಬಿಮಾ ಯೋಜನೆಯಡಿ ಅಪಾರ ಪ್ರಮಾಣದಲ್ಲಿ ರೈತರಿಗೆ ನೆರುವ ಸಿಕ್ಕಿರುವುದೇ ನಿದರ್ಶನ. - ಡಾ.ಕೆ.ಸುಧಾಕರ್ ಸಂಸದ, ಚಿಕ್ಕಬಳ್ಳಾಪುರ