ವಿಜಯಪುರ ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸಂಗಮೇಶ ಸಗರ, ವಿಠಲ ಬಿರಾದಾರ ಮತ್ತಿತರರಿದ್ದಾರೆ.  
ಜಿಲ್ಲೆ

ರೈತರ ಜಮೀನು ಕಬಳಿಸುವ ಹುನ್ನಾರ, ವಕ್ಫ್ ಆಸ್ತಿ ಕುರಿತು ಸಿಬಿಐ ತನಿಖೆಯಾಗಲಿ ಎಂದ ರೈತರು

ವಿಜಯಪುರ: ರೈತರ ಜಮೀನುಗಳನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವ ಹುನ್ನಾರ ಕಂಡು ಬರುತ್ತಿದ್ದು, ಈಗಾಗಲೇ ಹಲವು ರೈತರಿಗೆ ನೊಟೀಸ್ ನೀಡಲಾಗಿದೆ ಎಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಮನವಿ ಆಧರಿಸಿ ಎಲ್ಲ ಪ್ರಕರಣಗಳ ಕುರಿತು ಸಿಬಿಐ ತನಿಖೆಯಾಗಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದರು.

ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ರಾಜ್ಯದಲ್ಲಿ ವಕ್ಫ್ ಹಗರಣ ಜೋರಾಗಿ ಸದ್ದು ಮಾಡುತ್ತಿದೆ. ರೈತರ ಜಮೀನು ಸಹ ಬಿಡದೆ ವಕ್ಫ್ ಆಸ್ತಿಯಾಗಿ ಮಾರ್ಪಡಿಸುವ ಹುನ್ನಾರ ಕಂಡು-ಕೇಳಿ ಬರುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರ ಜಮೀನುಗಳು ಹಿಂದಿನ ಕಾಲದಿಂದಲೂ ಹಿರಿಯರ ಮುಖಾಂತರ ವಾರ್ಸಾ ನಾತಿಯಿಂದ ಬಂದಂತಹ ಜಮೀನುಗಳಾಗಿದ್ದು, ಇಂತವುಗಳನ್ನು ಉದ್ದೇಶ ಪೂರ್ವಕವಾಗಿ ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನು ವಕ್ಪ್ ಆಸ್ತಿ ಎಂದು ಸುಮಾರು 89 ರೈತರಿಗೆ ನೋಟಿಸ್ ನೀಡಿದ್ದಾರೆಂಬುದು ತಿಳಿದು ಬಂದಿದೆ. ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಹೋಬಳಿಯಲ್ಲಿ ಕೂಡಾ ಅಂದಾಜು 15 ರೈತರಿಗೆ ಇದೆ ಪರಿಸ್ಥಿತಿ ಎದುರಾಗಿದೆ. ಇಂಗಳೇಶ್ವರ ಗ್ರಾಮದಲ್ಲಿಯೂ 4 ರೈತರಿಗೆ ನಿಮ್ಮದು ವಕ್ಪ್ ಆಸ್ತಿ ಎಂದು ಹೇಳುತ್ತಿದ್ದಾರೆಂದು ಗ್ರಾಮದ ರೈತರು ಅಳಲು ತೊಡಿಕೊಳ್ಳುತ್ತಿದ್ದಾರೆ. ಈ ರೀತಿ ನಡೆಸುತ್ತಿರುವ ಹುನ್ನಾರಕ್ಕೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಮುಖಂಡರಾದ ವಿಠಲ ಬಿರಾದಾರ, ಎಂ.ಜಿ. ಯಂಕಂಚಿ, ಬಾಲಪ್ಪಗೌಡ ಲಿಂಗದಳ್ಳಿ, ಸೋಮನಗೌಡ ಪಾಟೀಲ, ಗುರುಲಿಂಗಪ್ಪ ಪಡಸಲಗಿ, ಮಹೇಶ ಯಡಹಳ್ಳಿ, ಬಾಗಪ್ಪ ನಾಟೀಕಾರ, ದಾವಲಸಾಬ ನದಾಪ, ಬಸವರಾಜ ಜಂಗಮಶೆಟ್ಟಿ, ಸಂಗಪ್ಪ ಕಾಗಿ, ಲಾಲಸಾಬ ಹಳ್ಳೂರ, ರ‌್ಯಾವಪ್ಪಗೌಡ ಪೋಲೇಸಿ, ಗೊಲ್ಲಾಳಪ್ಪ ಚೌಧರಿ, ಚನ್ನಬಸಪ್ಪ ಸಿಂಧೂರ, ರಾಮನಗೌಡ ಹಾದಿಮನಿ, ಶಿವರಾಜಗೌಡ ಬಿರಾದಾರ, ನಾಗರಾಜ ತೋಟದ, ಶ್ರೀಶೈಲ ಬಂಡಿ, ಅಶೋಕ ಉಪ್ಪಲದಿನ್ನಿ ಮತ್ತಿತರರಿದ್ದರು.