ಜಿಲ್ಲೆ

ತುಂತುರು ಮಳೆಯ ನಿರೀಕ್ಷೆಯಲ್ಲಿ ರೈತರು

ಮಂಜುನಾಥ ಅಂಗಡಿ

ಮಂಜುನಾಥ ಎಸ್. ಅಂಗಡಿ ಧಾರವಾಡ ಈ ವರ್ಷದ ಹಿಂಗಾರು ಬಿತ್ತನೆಗೆ ಸುಮಾರು ಒಂದು ತಿಂಗಳಷ್ಟು ಹಿನ್ನಡೆಯಾಗಿದೆ. ಅಕ್ಟೋಬರ್‌ನಲ್ಲಿ ಮುಂಗಾರು ಬೆಳೆ ಕಟಾವು ವೇಳೆ ಬೆಂಬಿಡದ ಮಳೆಗೆ ಬೆಳೆ ನಷ್ಟವಾಗಿದೆ. ಅಕ್ಟೋಬರ್‌ನಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಭೂಮಿಯ ತೇವಾಂಶ ಕಡಿಮೆಯಾಗದ ಕಾರಣ ಬಿತ್ತನೆಗೆ ಹದವಿರಲಿಲ್ಲ. ತಿಂಗಳುಗಟ್ಟಲೇ ವಿಳಂಬ ಮಾಡಿ ಬಿತ್ತನೆ ಮಾಡಿ ರೈತರೀಗ ಮಳೆಯಾಗಲಿ ಎಂದು ಆಕಾಶದತ್ತ ನೋಡುವಂತಾಗಿದೆ. ಜೋಳ, ಗೋಽ, ಕಡಲೆ, ಗೋವಿನಜೋಳ ಮತ್ತು ಹತ್ತಿ ಜಿಲ್ಲೆಯ ಹಿಂಗಾರು ಬೆಳೆಗಳು. ವರ್ಷವಿಡೀ ಉಣ್ಣಲು ರೈತರು ಜೋಳ, ಗೋಽ ಬೆಳೆ ಬೆಳೆಯುತ್ತಾರೆ. ಜತೆಗೆ ಜಾನುವಾರುಗಳಿಗೆ ಹೊಟ್ಟು, ಮೇವಿಗಾಗಿ ಈ ಬೆಳೆಗಳನ್ನು ಅವಲಂಬಿಸುತ್ತಾರೆ. ಹಿಂಗಾರು ಬಿತ್ತನೆಯ ನಂತರ ಒಂದಿಷ್ಟು ಮಳೆಯಾದರೆ ಜೋಳ, ಗೋಽ ಕೈಸೇರುವ ಜತೆಗೆ ವಾಣಿಜ್ಯ ಬೆಳೆಯಾದ ಕಡಲೆ ಅಷ್ಟಿಷ್ಟು ಲಾಭ ತಂದು ಕೊಡುತ್ತದೆ. ಆದರೆ, ಬಿತ್ತನೆಯ ನಂತರ ಮಳೆಯ ಸುಳಿವು ಇಲ್ಲದಿರುವುದು ರೈತರ ನಿದ್ದೆಗೆಡಿಸಿದೆ. ನ. 7ರಿಂದ ಆರಂಭವಾದ ವಿಶಾಖ ಮಳೆ ಮತ್ತು ನ. 20ರಿಂದ ಆರಂಭವಾದ ಅನೂರಾಧಾ ಮಳೆ ಮುನಿಸಿಕೊಂಡಿವೆ. ಹೀಗಾಗಿ ಅನಿವಾರ್ಯವಾಗಿ ರೈತರು ಬೆಳೆಗಳಿಗೆ ನೀರುಣಿಸುವ ಸಾಹಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನೀರಾವರಿ ವ್ಯವಸ್ಥೆ ಇರುವ ರೈತರು ತುಂತುರು ನೀರಾವರಿ ಮೂಲಕ ನೀರುಣಿಸುತ್ತಿದ್ದಾರೆ. ಮಳೆಯನ್ನೇ ಆಶ್ರಯಿಸಿರುವ ರೈತರು ಚಿಂತೆಗೀಡಾಗಿದ್ದಾರೆ. * ಶೇ. 70 ಪ್ರದೇಶ ಬಿತ್ತನೆ: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 2,01,805 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇತ್ತು. ಆದರೆ, 1,43,245 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಶೇ. 70.98ರಷ್ಟು ಪ್ರದೇಶ ಬಿತ್ತನೆಯಾಗಿದೆ.

ಭೂಮಿಯ ಆಳದಲ್ಲಿ ಸಾಕಷ್ಟು ತೇವಾಂಶವಿದ್ದರೂ ಮೇಲ್ಭಾಗ ಒಣಗಿದೆ. ನವೆಂಬರ್ ಅರ್ಧ ಮುಗಿದಿದ್ದು, ಇನ್ನು ಮುಂದೆ ಮಳೆಯಾಗುವ ಸಾಧ್ಯತೆ ತೀರ ಕಡಿಮೆ. ಹತ್ತಿ, ತರಕಾರಿ ಬೆಳೆಗಳಿಗೆ ಮಳೆ ಬೇಡವಾದರೂ ಒಣಬೇಸಾಯವುಳ್ಳ ರೈತರಿಗೆ ಮಳೆ ಬೇಕಾಗಿದೆ. ಯಾವುದಾದರೂ ಚಂಡಮಾರುತ ಅಥವಾ ವಾಯುಭಾರ ಕುಸಿತವಾದರೆ ಮಾತ್ರ ಮಳೆಯನ್ನು ನಿರೀಕ್ಷಿಸಬಹುದು. - ಆರ್.ಎಚ್. ಪಾಟೀಲ, ಹವಾಮಾನ ತಜ್ಞ, ಕೃಷಿ ವಿಶ್ವವಿದ್ಯಾಲಯ ಧಾರವಾಡ