ನಂಜನಗೂಡು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಪೂರ್ಣ ಬೆಂಬಲ ಸೂಚಿಸಿದೆ.
ನಂಜನಗೂಡು ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ತಾಲೂಕು ಕಚೇರಿ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಆಗಮಿಸಿದ ರೈತ ಸಂಘದ ಮುಖಂಡ ಟಿ.ಆರ್.ವಿದ್ಯಾಸಾಗರ್ ಹಾಗೂ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.
ಬಳಿಕ ವಿದ್ಯಾಸಾಗರ್ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ ಅಧಿಕಾರಿಗಳಿಗಿಂತ ರೈತರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಯ ಮಕ್ಕಳು. ಪ್ರತಿ ಗ್ರಾಮಗಳಿಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜನೆ ಮಾಡಿಲ್ಲ. ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಲವು ಗ್ರಾಮಗಳಿಗೆ ಹೋಗಿ ಕೆಲಸ ಮಾಡಬೇಕು. ಅವರಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು. ಇದು ಎರಡನೇ ಬಾರಿ 23 ಸಮಸೆಗಳನ್ನು ಬೇಡಿಕೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹೆಣ್ಣು ಮಕ್ಕಳು ಕೂಡ ಗ್ರಾಮ ಲೆಕ್ಕಾಧಿಕಾರಿಗಳ ಕೆಲಸಕ್ಕೆ ಹೆಚ್ಚಾಗಿ ಸೇರಿಕೊಂಡಿದ್ದಾರೆ. ಅವರು ಪ್ರತಿ ಗ್ರಾಮಕ್ಕೆ ತೆರಳುವಾಗ ಕನಿಷ್ಠ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗೆ ಸರ್ಕಾರ ಕೂಡ ಟೆಕ್ನಾಲಜಿಗಳ ಮೂಲಕ ಕೆಲಸ ಮಾಡಲು ಸೂಚಿಸಿದೆ. ಇವರಿಗೆ ಸುಸಜ್ಜಿತವಾದ ಮೊಬೈಲ್‌ಗಳು ಮತ್ತು ಅದಕ್ಕೆ ಬೇಕಾದ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಲಕ್ಷಾಂತರ ಪೌತಿ ಖಾತೆ ಅರ್ಜಿಗಳು ಬಾಕಿ ಉಳಿದಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಶೀಘ್ರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಎಚ್ಚರಿಕೆ ನೀಡಿದರು. ಬಳಿಕ ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸನೂರು ಅವರ ಮೂಲಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ನಿಂಗಯ್ಯ, ರಾಜಸ್ವ ನಿರೀಕ್ಷಕ ಡಿಸೋಜ, ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್, ಇಮ್ಮಾವು ರಘು, ಶ್ವೇತಾ, ಬಂಗಾರಸ್ವಾಮಿ ಸೇರಿದಂತೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.