ಜಿಲ್ಲೆ

6 ತಾಸು ತ್ರೀ ಫೇಸ್ ವಿದ್ಯುತ್ ನೀಡಲು ಒತ್ತಾಯ ಬ್ಯಾಡಗಿ ಹೆಸ್ಕಾಂ ಕಾರ್ಯಾಲಯದ ಎದುರು ರೈತ ಸಂಘದ ಪ್ರತಿಭಟನೆ

ಬ್ಯಾಡಗಿ: ತಾಲೂಕಿನಲ್ಲಿ ಕೊಳವೆ ಬಾವಿಯ ಪಂಪ್​ಸೆಟ್​ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ಖಂಡಿಸಿ ಹೆಸ್ಕಾಂ ಇಂಜಿನಿಯರ್ ಹಾಗೂ ಸಿಬ್ಬಂದಿ ವಿರುದ್ಧ ರೈತರು ಹೆಸ್ಕಾಂ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, 15-20 ದಿನಗಳಿಂದ ಮಳೆ ಕೈಕೊಟ್ಟು ರೈತರು ಆತಂಕದಲ್ಲಿದ್ದಾರೆ. ಬಿತ್ತಿದ ಬೆಳೆ ಬಾರದಂತಾಗಿ, ಹಾಕಿದ ಖರ್ಚು ಗೊಬ್ಬರ ಬೀಜಕ್ಕೂ ಪರದಾಡುವಂತ ಸ್ಥಿತಿಯಿದೆ. ಕೊಳವೆಬಾವಿ ಹೊಂದಿದ ರೈತರು ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಇದರ ನಡುವೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಕಡಿತಗೊಳಿಸಿ ರೈತರನ್ನು ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ. ರೈತರಿಗೆ ಆರು ತಾಸು ತ್ರೀ ಫೇಸ್ ವಿದ್ಯುತ್ ಭರವಸೆ ನೀಡಿದ್ದ ಅಧಿಕಾರಿಗಳು ಈಗ ನಾಲ್ಕು ತಾಸು ನೀಡುತ್ತಿದ್ದಾರೆ ಎಂದು ದೂರಿದರು.

ತಾಲೂಕಿನ ವಿವಿಧೆಡೆ ಹೊಲಗಳಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಬದಲಾಯಿಸಲು ಹಾಗೂ ದುರಸ್ತಿಗೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು.

ಆರು ತಾಸು ನೀಡುವ ಭರವಸೆ:ಪ್ರತಿಭಟನೆ ವೇಳೆ ಮಾತನಾಡಿದ ಹೆಸ್ಕಾಂ ಇಂಜಿನಿಯರ್ ಹಾಲೇಶ ಅಂತರವಳ್ಳಿ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಕಡೆಗಳಲ್ಲಿ ಗ್ರೀಡ್​ಗಳಿದ್ದು, ಎಲ್ಲ ಕಡೆಗೂ ಆರು ತಾಸು ವಿತರಿಸಲಾಗುತ್ತಿದೆ. ಆದರೆ, ಕೆಲವೊಮ್ಮೆ ವಿದ್ಯುತ್, ತಾಂತ್ರಿಕತೆಯಿಂದ ಸಮಸ್ಯೆ ಉಂಟಾಗುತ್ತಿದೆ. ರೈತರಿಗೆ ತೊಂದರೆ ನೀಡುವ ಉದ್ದೇಶವಿಲ್ಲ, ನಾಳೆಯಿಂದ ನಿಗದಿಪಡಿಸಿದ ಆರು ತಾಸು ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಗಂಗಣ್ಣ ಎಲಿ, ಕಿರಣಕುಮಾರ ಗಡಿಗೋಳ, ಮೌನೇಶ ಕಮ್ಮಾರ, ಮಂಜುನಾಥ ಹಿರೇಮಠ, ನಾಗಪ್ಪ ಬಾವಿಕಟ್ಟಿ, ಮಲಕಪ್ಪ ಅರಳೀಕಟ್ಟಿ, ಸಂತೋಷ ಬಡ್ಡಿಯವರ, ಸಂಜೀವ ಬಿಷ್ಟಣ್ಣನವರ, ಹರೀಶ ತಳಮನಿ, ವೀರನಗೌಡ ಪಾಟೀಲ, ಹನುಮಂತಪ್ಪ ಕೆಂಗೊಂಡ, ಚಂದ್ರಪ್ಪ ದೇಸಾಯಿ, ಬಸವರಾಜ ಕುಮ್ಮೂರು, ಮಹಾಂತೇಶ ಕಟ್ಟಿಮನಿ, ಜಿಗಳೆಪ್ಪ ಹೆಡಿಗೊಂಡ, ಚನ್ನಬಸಪ್ಪ ಚಿಕ್ಕಣಜಿ, ಬಸಪ್ಪ ದೊಡ್ಡಮನಿ ಇದ್ದರು.