ಶಿಕಾರಿಪುರ ತಾಲೂಕು ರೈತ ಸಂಘದ ಅಧ್ಯಕ್ಷರ ವಿರುದ್ಧ ಅನಗತ್ಯ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ದೂರು ಸಲ್ಲಿಸಿದರು. ಮಂಜುನಾಥ ಗೌಡ, ಬೈರೇಗೌಡ, ಉಮೇಶ್ ಪಾಟೀಲ್, ಶೇಖರಪ್ಪ ಇತರರಿದ್ದರು. 
ಜಿಲ್ಲೆ

ಪೊಲೀಸರ ವಿರುದ್ಧ ರೈತ ಸಂಘ ಪ್ರತಿಭಟನೆ

ಶಿಕಾರಿಪುರ: ತಾಲೂಕು ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ ಬಣ)ದ ಅಧ್ಯಕ್ಷ ವಿರುದ್ಧ ಪೊಲೀಸರು ಅನಗತ್ಯವಾಗಿ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮನವಿ ಸಲ್ಲಿಸಿದರು.

ಕಪ್ಪನಹಳ್ಳಿ ಗ್ರಾಮದ ನಿವಾಸಿ ರವಿಕುಮಾರ್ ನಮ್ಮ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷರು ಮಾತ್ರವಲ್ಲದೆ ಮಾಜಿ ಸೈನಿಕರೂ ಆಗಿದ್ದಾರೆ. ಹಳ್ಳಿಯಲ್ಲಿ ನಡೆದ ವೈಯಕ್ತಿಕ ಜಗಳವೊಂದರಲ್ಲಿ ರವಿಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆಯಲ್ಲಿ ಪೆಟ್ಟು ತಿಂದವರವರಿಗೆ ಪೋಲಿಸ್ ಇಲಾಖೆ ನ್ಯಾಯ ಕೊಡಿಸಬೇಕು. ಅದನ್ನು ಬಿಟ್ಟು ಪೆಟ್ಟು ತಿಂದವರ ಮೇಲೆಯೇ ದೂರು ದಾಖಲಿಸಲಾಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ದೂರಿದರು.
ದೇಶಕ್ಕಾಗಿ ದುಡಿದ ರವಿ ನಿವೃತ್ತರಾದ ಮೇಲೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ರವಿಗೆ ನ್ಯಾಯ ದೊರೆಯುವವರೆಗೆ ನಾವು ವಿರಮಿಸುವದಿಲ್ಲ. ಜಿಲ್ಲೆಯ ಎಲ್ಲ ತಾಲೂಕು ಘಟಕದ ಅಧ್ಯಕ್ಷರು, ರಾಜ್ಯ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ. ನೊಂದವರಿಗೆ ನ್ಯಾಯ ಸಿಗಲೇಬೇಕು. ವರಿಷ್ಠಾಧಿಕಾರಿಗಳು ಇತ್ತ ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಭಕ್ತರಹಳ್ಳಿ ಬೈರೇಗೌಡ, ಉಮೇಶ್ ಪಾಟೀಲ್, ಹಿತ್ತಲ ಶೇಖರಪ್ಪ, ಸೈಯದ್ ಶಫಿವುಲ್ಲಾ, ಬಸವರಾಜ್ ಬನ್ನೂರು, ಅಮೃತರಾಜ್, ಧನಂಜಯಪ್ಪ, ಸುನೀತಾ, ರೇವಣಪ್ಪ, ಬಸವರಾಜ್ ಅಣ್ಣಾಪುರ, ಶ್ರುತಿ ರವಿಕುಮಾರ್ ಇತರರಿದ್ದರು.