ಜಿಲ್ಲೆ

ವಿದ್ಯುತ್ ಕಡಿತಕ್ಕೆ ರೈತಸಂಘ ಆಕ್ರೋಶ

Davangere - Desk - Mahesh Babu E

ಮೊಳಕಾಲ್ಮೂರು: ಕಳೆದ ಎರಡ್ಮೂರು ದಿನಗಳಿಂದ ಕೃಷಿ ಪಂಪ್‌ಸೆಟ್ ಹಾಗೂ ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆಗೆ ಕಡಿತ ಹಾಕುತ್ತಿರುವುದನ್ನು ಖಂಡಿಸಿ ರೈತಸಂಘದ ಪದಾಧಿಕಾರಿಗಳು ಪಟ್ಟಣದ ಬೆಸ್ಕಾಂ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಬಯಲುಸೀಮೆ ಪ್ರದೇಶದಲ್ಲಿ ಮಳೆ ಕಡಿಮೆ, ಕೊಳವೆಬಾವಿ ನಂಬಿ ಕೃಷಿ ಕೈಗೊಳ್ಳುವ ವರ್ಗವೇ ಹೆಚ್ಚು. ಇಂತಹ ಸಂದರ್ಭ ಕೃಷಿ ಪಂಪ್‌ಸೆಟ್ ಹಾಗೂ ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡದಿರುವುದು ತೀವ್ರ ಸಮಸ್ಯೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಸದ ಮನೆಗೆ ವಿದ್ಯುತ್ ಸಂಪರ್ಕ ಪರವಾನಗಿ ಪಡೆದು ಬಿಲ್ ಪಾವತಿಸುತ್ತಿದ್ದರೂ ಸಂಜೆ 6 ರಿಂದ ಬೆಳಗ್ಗೆ 10ರ ವರೆಗೆ ವಿದ್ಯುತ್ ಕಡಿತ ಮಾಡುವುದು ಸರಿಯಲ್ಲ. ದೇಶಕ್ಕೆ ಅನ್ನ ಕೊಡುವ ರೈತರಿಗೇಕೆ ಇಂತಹ ಶಿಕ್ಷೆ ಎಂದು ಪ್ರಶ್ನೀಸಿದರು.

ಸುಟ್ಟ ಟಿಸಿ ಸಕಾಲಕ್ಕೆ ಸರಿಪಡಿಸಲು ಉದಾಸೀನ ತೋರುತ್ತಿರುವ ಬೆಸ್ಕಾಂ ಸಿಬ್ಬಂದಿ ನಡೆ ಬೇಸರ ತರಿಸಿದೆ. ವಾಸ್ತವ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ವಿದ್ಯುತ್ ಪೂರೈಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೂಡಲೆ ಬೆಸ್ಕಾಂ ತನ್ನ ನಿರ್ಧಾರವನ್ನು ಹಿಂಪಡೆದು, ಗುಣಮಟ್ಟದ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಬೇಡಿಕೆಗೆ ಮನ್ನಣೆ ದೊರೆಯತ್ತಿದ್ದಾರೆ ಹೋರಾಟದ ಸ್ವರೂಪ ಬದಲಾಗಿದೆ. ರಸ್ತೆ ತಡೆ, ತಾಲೂಕು, ಜಿಲ್ಲಾಡಳಿತ ಹಾಗೂ ಬೆಸ್ಕಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ರಾತ್ರಿ ವೇಳೆ ಕಳ್ಳರು ಮೋಟಾರು, ಪೈಪ್ ಕೇಬಲ್ ಕದಿಯುತ್ತಾರೆ. ಜತೆಗೆ ಕೃಷಿಕರ ಮಕ್ಕಳ ಶಿಕ್ಷಣಕ್ಕೂ ಸಮಸ್ಯೆ ಆಗಿದೆ. ವಿಷಜಂತುಗಳ ಭೀತಿ ಹೆಚ್ಚಾಗಿದೆ. ಈ ಸಮಸ್ಯೆ ಅರಿತು ವಿದ್ಯುತ್ ಪೂರೈಕೆಗೆ ಕ್ರಮಕೈಗೊಂಡು ಕೃಷಿ ಕ್ಷೇತ್ರವನ್ನು ಬಲವರ್ಧನೆಗೊಳಿಸಬೇಕು ಎಂದು ಆಗ್ರಹಿಸಿದರು.

ನಾವೇನ್ ಟಿವಿ, ಎಸಿ ಹಾಕಿಸಿಕೊಂಡಿಲ್ಲ: ಜಮೀನುಗಳಲ್ಲಿ ಮನೆ ಮಾಡಿಕೊಂಡು ನಾವೇನೂ ಮೋಜು-ಮಸ್ತಿ ಮಾಡುತ್ತಿಲ್ಲ. ಕೃಷಿಯಲ್ಲಿ ಬದುಕು ಕಂಡುಕೊಳ್ಳಲು ಶ್ರಮಿಸುತ್ತಿದ್ದೇನೆ. ಟಿವಿ, ಎಸಿ ಹಾಕಿಕೊಂಡಿಲ್ಲ. ಮಕ್ಕಳ ಓದು, ಕತ್ತಲಲ್ಲಿ ವಿಷ ಜಂತುಗಳ ರಕ್ಷಣೆಗೆ ಕರೆಂಟ್ ಬೇಕು ಸ್ವಾಮಿ. ಇದಕ್ಕೆ ಅವಕಾಶ ಕೊಡದಿದ್ರೆ ನಾವು ಕೃಷಿ ಬಿಟ್ಟು ವಲಸೆ ಹೋಗಬೇಕಾ? ನಿವೇ ಹೇಳಿ ಸ್ವಾಮಿ ಎಂದು ಅಧಿಕಾರಿಗಳನ್ನು ರೈತರು ಪ್ರಶ್ನೀಸಿದರು.

ರೈತ ಸಂಘ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ಹಾರ ಭದ್ರತೆ ಸುರಕ್ಷತೆಗಾಗಿ ಕೃಷಿ ಪಂಪ್‌ಸಟ್‌ಗಳಿಗೆ ವಿದ್ಯುತ್ ಪೂರೈಕೆ ಸಂದರ್ಭ ಮೊದಲ ಆದ್ಯತೆ ಕೊಡಬೇಕು. ಬರಗಾಲ, ಬೆಲೆ ಕುಸಿತ ವಿವಿಧ ಕಾರಣಕ್ಕೆ ನಷ್ಟ ಅನುಭವಿಸುವ ಕೃಷಿಕರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು ಎಂದು ಕೋರಿದರು.

ಮನವಿ ಸ್ವೀಕರಿಸಿ ಮಾತನಾಡಿ ಹಿರಿಯೂರು ಬೆಸ್ಕಾಂ ಕೇಂದ್ರ ಕಚೇರಿ ಎಇಇ ರಾಮಚಂದ್ರಪ್ಪ, ಬಳಕೆ ಪ್ರಮಾಣ ಹೆಚ್ಚಾಗಿರುವ ಕಾರಣ ವಿದ್ಯುತ್ ಕಡಿತ ಅನಿವಾರ್ಯ. ರೈತರ ಕಷ್ಟ ಅರ್ಥವಾಗುತ್ತೆ. ಆದರೆ, ಸರ್ಕಾರದ ಆದೇಶವನ್ನು ಪಾಲಿಸಬೇಕು. ಆದಾಗ್ಯೂ ತೋಟದ ಮನೆಗಳಲ್ಲಿನ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ಪದಾಧಿಕಾರಿಗಳಾದ ರವಿಕುಮಾರ, ಮಂಜುನಾಥ, ಎಚ್.ಟಿ.ಚಂದ್ರಣ್ಣ, ಕನಕ ಶಿವಮೂರ್ತಿ, ನಿಂಗಣ್ಣ, ಮೇಘನಾಥರಡ್ಡಿ, ಮುತ್ತಯ್ಯ, ಪಾಲಯ್ಯ, ದೊಡ್ಡಯ್ಯ, ತಿಪ್ಪೇಸ್ವಾಮಿ, ಒ.ಪಾಪಣ್ಣ, ಬಂಗಿ ಸೂರಯ್ಯ, ಈರಣ್ಣ, ತಮ್ಮಣ್ಣ, ಬಸವರಾಜ್, ಶಿವಣ್ಣ ಇತರರಿದ್ದರು.