ದೊಡ್ಡಿಂದುವಾಡಿ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡಸುತ್ತಿದ್ದ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಶಂಕರ್ ಆಗಮಿಸಿ ಪ್ರತಿಭಟನಾನಿರತರ ಮನವಿ ಆಲಿಸಿದರು. 
ಜಿಲ್ಲೆ

ರಸ್ತೆ ಸಂಚಾರ ತಡೆದು ರೈತ ಸಂಘ ಆಕ್ರೋಶ

ಕೊಳ್ಳೇಗಾಲ: ಕೆಎಸ್‌ಆರ್‌ಟಿಸಿ ಬಸ್‌ಗಳು ದೊಡ್ಡಿಂದುವಾಡಿ ಗ್ರಾಮದೊಳಗೆ ಬಾರದಿರುವ ಕುರಿತು ಎರಡ್ಮೂರು ಬಾರಿ ಮನವಿ ಮಾಡಲಾಗಿದೆಯಾದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರೈತ ಸಂಘದ ಕಾರ್ಯಕರ್ತರು ಕೆಲಕಾಲ ದೊಡ್ಡಿಂದುವಾಡಿ ವೃತ್ತದ ಬಳಿ ರಸ್ತೆ ಸಂಚಾರ ತಡೆದು ಚಳವಳಿ ನಡೆಸಿದರು.

ದೊಡ್ಡಿಂದುವಾಡಿ ಗ್ರಾಮದೊಳಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿಲ್ಲ. ಬದಲಾಗಿ ಮುಖ್ಯರಸ್ತೆಯಲ್ಲೆ ಕೆಲ ನಿಲ್ಲಿಸಿ ಹಿಂದಿರುಗುತ್ತಿವೆ. ಅಲ್ಲದೆ ಹೆಚ್ಚುವರಿ ಬಸ್‌ಗಳನ್ನೂ ಬಿಟ್ಟಿಲ್ಲ. ಈ ಸಂಬಂಧ ಹಲವು ಬಾರಿ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದ ಪ್ರತಿಭಟ ನಾಕಾರರು, ಸಾರಿಗೆ ಅಧಿಕಾರಿಗಳ ವೈಫಲ್ಯ ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಗೌಡೇಗೌಡ ಮಾತನಾಡಿ, ಮಹದೇಶ್ವರ ಬೆಟ್ಟದಿಂದದೊಡ್ಡಿಂದುವಾಡಿ ಗ್ರಾಮಕ್ಕೆ ಬರುವ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸುವುದಿಲ್ಲ. ಹತ್ತಿಸಿದರೂ ಗ್ರಾಮದಲ್ಲಿ ಇಳಿಸುವುದಿಲ್ಲ. ಅಲ್ಲದೆ ಕೆಲ ನಿರ್ವಾಹಕರು ಉದ್ಧಟ ವರ್ತನೆ ತೋರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಪೋ ವ್ಯವಸ್ಥಾಪಕ ಶಂಕರ್, ರೈತರಿಂದ ಅಹವಾಲು ಸ್ವೀಕರಿಸಿ, ಇಂದಿನಿಂದಲೇ ಗ್ರಾಮದೊಳಗೆ ಬಸ್‌ಗಳು ಪ್ರವೇಸುವುದರ ಜತೆಗೆ ನಿಲುಗಡೆಗೆ ಕ್ರಮ ವಹಿಸಲಾಗುವುದು. ಹೆಚ್ಚುವರಿ ಬಸ್ ಖರೀದಿ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದ್ದು, ಖರೀದಿಯಾದ ಕೂಡಲೆ ಕ್ರಮ ವಹಿಸಲಾಗುವುದು. ಅಲ್ಲದೆ ಹೆಚ್ಚು ಬಸ್‌ಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದ್ದು, ಸಮಸ್ಯೆಯನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ವಹಿಸಲಾಗುವುದು. ಹಾಗಾಗಿ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ವಾರದೊಳಗೆ ಬೇಡಿಕೆ ಈಡೇರದಿದ್ದರೆ ಡಿಪೋಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು, ವಾಹನ ಸವಾರರು, ತುರ್ತು ತೆರಳಬೇಕಾದವರು ಪರದಾಡುವಂತಾಯಿತು. ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶ್ರೀಕಂಠಸ್ವಾಮಿ, ತಾಲೂಕು ಅಧ್ಯಕ್ಷ ಶಿವಮಲ್ಲು, ಪದಾಧಿಕಾರಿಗಳಾದ ರವಿನಾಯ್ಡು, ಮಧುವನಹಳ್ಳಿ ಬಸವರಾಜು, ಶಿವಮಲ್ಲು, ಜಾನ್ ಕೆನಡಿ, ಪೆರಿಯ ನಾಯಗಂ, ವಸಂತ, ರವಿ, ಪ್ರಕಾಶ್, ಬಸವರಾಜು, ಚಾರ್ಲಿ, ಅಂಥೋಣಿಸ್ವಾಮಿ ಮತ್ತಿತರರಿದ್ದರು.