ಸಾಗರದಲ್ಲಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ದಿನೇಶ್ ಶಿರವಾಳ, ಹೊಯ್ಸಳ ಗಣಪತಿಯಪ್ಪ, ರಮೇಶ್ ಈ. ಕೆಳದಿ, ರಾಮಚಂದ್ರಪ್ಪ, ಕಿರಣ್ ಕುಮಾರ್ ಇತರರಿದ್ದರು. 
ಜಿಲ್ಲೆ

ತಹಸೀಲ್ದಾರ್ ಕಚೇರಿಗೆ ಬೀಗ ಜಡಿದ ರೈತ ಸಂಘ

Shivamogga - Desk - Vinayakumar D B

ಸಾಗರ: ಮಾಹಿತಿ ಕೇಳಲು ಬಂದ ರೈತ ಪ್ರಮುಖರಿಗೆ ಅಗೌರವ ತೋರಿದ ಶಿರಸ್ತೇದಾರರ ಧೋರಣೆ ಖಂಡಿಸಿ ಶುಕ್ರವಾರ ಸಂಜೆ ರೈತ ಸಂಘದ(ಡಾ. ಗಣಪತಿಯಪ್ಪ ಸ್ಥಾಪಿತ) ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ತಾಳಗುಪ್ಪದ ಕೂಡ್ಲಿಮಠ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಸುತ್ತೋಲೆ ಬಂದಿದೆ. ಸುತ್ತೋಲೆ ಪ್ರಕಾರ ರಸ್ತೆ ನಿರ್ಮಿಸುವ ಸ್ಪಷ್ಟ ಸೂಚನೆ ನೀಡಲಾಗಿದೆ. ಆದರೆ ಅಧಿಕಾರಿಗಳು ಸರ್ಕಾರದ ಸುತ್ತೋಲೆಯನ್ನು ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ವಿಚಾರಿಸಲು ಬಂದರೆ ಕಚೇರಿಯಲ್ಲಿ ತಹಸೀಲ್ದಾರ್, ಉಪ ತಹಸೀಲ್ದಾರ್ ಇಲ್ಲ. ಶಿರಸ್ತೇದಾರ್ ತೋಯಿಜಾಕ್ಷಿ ಬಳಿ ವಿಷಯ ಪ್ರಸ್ತಾಪ ಮಾಡಿದರೆ, ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಲಿಮುಲ್ಲಾ ರೈತ ಸಂಘದ ಮನವಿ ಆಲಿಸಿ, ಕಚೇರಿಗೆ ಬೀಗ ಜಡಿದಿರುವುದು ನನಗೆ ತುಂಬ ಬೇಸರ ತಂದಿದೆ. ನಿಮ್ಮ ಸಮಸ್ಯೆಯನ್ನು ನನ್ನ ಬಳಿ ಬಂದು ಚರ್ಚೆ ಮಾಡಿ. ಕೂಡ್ಲಿಮಠದಲ್ಲಿ ರಸ್ತೆ ಸಂಪರ್ಕಕ್ಕೆ ಸಂಬಂಧಪಟ್ಟಂತೆ ಬಂದಿರುವ ಸುತ್ತೋಲೆಯನ್ನು ಪರಿಶೀಲನೆ ಮಾಡಿ, ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ರಮೇಶ್ ಈ. ಕೆಳದಿ, ರಾಮಚಂದ್ರಪ್ಪ, ಕಿರಣ್ ಕುಮಾರ್ ಇತರರಿದ್ದರು.