ಜಿಲ್ಲೆ

ಮಾತು ತಪ್ಪಿದ ರಾಜ್ಯ ಕಾಂಗ್ರೆಸ್ ಸರ್ಕಾರ

ಚನ್ನಗಿರಿ: ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ ಲಿಖಿತ ಭರವಸೆ ಕೊಟ್ಟು ಮಾತಿಗೆ ತಪ್ಪಿದ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಸೋಮವಾರ ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಇ.ಎಸ್. ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್. ತಿಪ್ಪೇಶಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೆರೇಟ್ ಕಂಪನಿಗಳ ಪರವಾದ ರೈತ ವಿರೋಧಿಯಾದ 3 ಕೃಷಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆಗ ರೈತರು ಎಂಎಸ್​ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡುವುದು, ವಿದ್ಯುತ್ ಖಾಸಗೀಕರಣ ಮಾಡಬಾರದು ಮತ್ತು ಇನ್ನು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ 700ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದರು. ಅಲ್ಲದೆ ಪ್ರತಿಭಟನೆಯಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಭಾಗಿಯಾಗಿತ್ತು. ಬಳಿಕ ಪ್ರತಿಭಟನೆಗೆ ಮಣಿದು 3 ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿತ್ತು. ಆದರೆ ಕೇಂದ್ರ ಕಾಯ್ದೆಗಳನ್ನು ಹಿಂಪಡೆಯಲಿಲ್ಲ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಹೊರಡಿಸುವಾಗ ಈ 3 ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ, ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಈವರೆಗೆ ಪ್ರಣಾಳಿಕೆಯ ಮಾತನ್ನು ಕಾಂಗ್ರೆಸ್ ಜಾರಿ ಮಾಡದೆ ರಾಜ್ಯದ ರೈತರನ್ನು ಕಡೆಗಾಣಿಸುತ್ತಿದೆ. ಮುಖ್ಯಮಂತ್ರಿಗಳು ಕೂಡಲೇ ಕಾಯ್ದೆಗಳನ್ನು ರದ್ದು ಮಾಡಬೇಕು, ಇಲ್ಲದೆ ಹೋದಲ್ಲಿ ರಾಜ್ಯವ್ಯಾಪಿ ರೈತಸಂಘದ ವತಿಯಿಂದ ಹೋರಾಟವನ್ನು ನಡೆಸಲಾಗುತ್ತದೆ ಎಂದರು.

ಹಸಿರುಸೇನೆ ತಾಲೂಕು ಅಧ್ಯಕ್ಷ ಶಾಂತಕುಮಾರ್ ಮಲಹಾಳ್, ನಿಂಗಪ್ಪ ನುಗ್ಗಿಹಳ್ಳಿ, ಬಿ.ಎಸ್. ಶಿವಕುಮಾರ್ ಬೊಮ್ಮೇನಹಳ್ಳಿ, ನೀತಿಗೆರೆ ಎಂ.ಸಿ.ಲಿಂಗೇಶ್, ಕೆ. ಮಹಾದೇವಪ್ಪ, ಎಸ್.ಪಿ. ಪ್ರಕಾಶ್ ಇದ್ದರು.