ಜಿಲ್ಲೆ

ರೈತಸಂಘ, ಸಿಐಟಿಯು ಪ್ರತಿಭಟನೆ

ಮೈಸೂರು: ಕೋವಿಡ್ ಎದುರಿಸಲು ಅಗತ್ಯ ಸುರಕ್ಷತಾ ಕ್ರಮ ಹಾಗೂ ಎಲ್ಲ ನಾಗರಿಕರಿಗೆ ಉಚಿತವಾಗಿ ಚಿಕಿತ್ಸೆ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್ ಸಂಕಷ್ಟ ಎದುರಾಗಿದೆ. ಇದನ್ನು ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾರ್ಪೋರೇಟ್ ಕಂಪನಿಗಳ ಪರವಾಗಿ ನೀತಿ ರೂಪಿಸಲಾಗುತ್ತಿದೆ. ಇದು ಜನವಿರೋಧ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದೇಶವನ್ನು ಕೋವಿಡ್ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜನದ್ರೋಹಿ ತಿದ್ದುಪಡಿ ಕಾಯ್ದೆಗಳನ್ನು ಹಾಗೂ ಸಾರ್ವಜನಿಕ ರಂಗದ ಕೈಗಾರಿಕೆಗಳು, ಹಣಕಾಸು ಸಂಸ್ಥೆಗಳ ಖಾಸಗೀಕರಣ ತಡೆಯಬೇಕೆಂದು ಒತ್ತಾಯಿಸಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಕೋವಿಡ್ ಸಮಸ್ಯೆ ಇತ್ಯರ್ಥವಾಗುವವರೆಗೆ ಕನಿಷ್ಠ ಮಾಸಿಕ 7,500 ರೂ. ನೆರವು, ಕುಟುಂಬಗಳ ಸದಸ್ಯರಿಗೆ ತಲಾ 10 ಕೆಜಿ ಸಮಗ್ರ ಆಹಾರ ಸಾಮಗ್ರಿ, ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಕಿಟ್ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ತಲಾ ಕುಟುಂಬಕ್ಕೆ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ಕೂಲಿಯನ್ನು ಕನಿಷ್ಠ 600 ರೂ.ಗೆ ಹೆಚ್ಚಿಸಬೇಕು. ನಿರುದ್ಯೋಗ ಭತ್ಯೆ ಮಾಸಿಕ 10,000 ರೂ. ನೀಡಬೇಕು. ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ವೇತನ ದೊರೆಯುವಂತೆ ಅಗತ್ಯ ಕ್ರಮ ವಹಿಸಬೇಕು. ಕಾರ್ಮಿಕ ಕಾಯ್ದೆಗಳ ದುರ್ಬಲಗೊಳಿಸುವಿಕೆಯನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಚಿಕ್ಕಣೇಗೌಡ, ಜಗದೀಶ್ ಸೂರ್ಯ ಇನ್ನಿತರರು ಪ್ರತಿಭಟನೆಯಲ್ಲಿದ್ದರು.