ಜಿಲ್ಲೆ

ಜೆಜೆಎಂನಲ್ಲಿ ಅಕ್ರಮ ತನಿಖೆಗೆ ಒತ್ತಾಯ: ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನ ಸಾಮಾನ್ಯರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ. ಅಂತೆಯೇ ಪ್ರತಿ ಗ್ರಾಮಕ್ಕೆ ರೂಪಿಸಿರುವ ಯೋಜನೆಯಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ನಳ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರನ್ನು ಒದಗಿಸಬೇಕಾಗಿದೆ. ಆದರೂ ಓವರ್ ಹೆಡ್‌ಟ್ಯಾಂಕ್ ನಿರ್ಮಿಸದೇ ಮನೆ ಮೆನೆಗಳಿಗೆ ನಳ ಸಂಪರ್ಕ ಕೊಡಲಾಗುತ್ತಿದೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಮಂಡ್ಯ ತಾಲೂಕಿನಾದ್ಯಂತ ಎಲ್ಲ ಗ್ರಾಮದಲ್ಲೂ ನಳ ಸಂಪರ್ಕ ನೀಡಲಾಗಿದೆ. ಅಂತೆಯೇ ಪ್ರತಿ ಸಂಪರ್ಕಕ್ಕೂ 1,500 ರೂ ಮುಂಗಡ ಕಟ್ಟಿಸಿಕೊಂಡು ನಳ ಸಂಪರ್ಕ ಕೊಡಲಾಗುತ್ತಿದೆ. ಆದರೆ ಯೋಜನೆಯ ಎಲ್ಲ ನಿಯಮ ಮತ್ತು ನಿಬಂಧನೆಯನ್ನು ಬದಿಗೊತ್ತಿ ಪ್ರತಿ ಗ್ರಾಮಕ್ಕೂ 1 ಕೋಟಿ ರೂ.ನಿಂದ 1.5 ಕೋಟಿ ರೂ. ದುರುಪಯೋಗಪಡಿಸಿಕೊಳ್ಳಲಾಗಿದೆ. ಇದರಲ್ಲಿ ಅಧಿಕಾರಿ ಮತ್ತು ರಾಜಕಾರಣಿಗಳ ಕೈವಾಡವಿದೆ. ಈ ಯೋಜನೆಯ ದಿಕ್ಕು ತಪ್ಪಿಸಿ ನೂರಾರು ಕೋಟಿ ರೂ ಭ್ರಷ್ಟಾಚಾರ ನಡೆಸುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಇದರ ತನಿಖೆ ನಡೆಸಿ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪಾಜಿ, ತಾಲೂಕು ಘಟಕದ ಅಧ್ಯಕ್ಷ ಅಣ್ಣೆಗೌಡ, ಕಾರ್ಯದರ್ಶಿ ಆನಂದ್, ಮುಖಂಡರಾದ ಗಾಣದಾಳು ಜಯರಾಮು, ರವೀಂದ್ರ, ಜಯರಾಮು, ಗಿರಿಗೌಡ, ಹುಲ್ಕೆರೆ ಮಹದೇವು ಇತರರಿದ್ದರು.