ಚನ್ನರಾಯಪಟ್ಟಣ: ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಕೆರೆಕಟ್ಟೆಗಳನ್ನು ತುಂಬಿಸಿದರೆ ಮಾತ್ರ ರೈತರ ಉಳಿವು. ಈ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಹೆಚ್ಚು ಗಮನ ಹರಿಸಬೇಕು ಎಂದು ಆದಿಚುಂಚನಗಿರಿ ಮಹಾಮಠದ ಶ್ರೀ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬಾಗೂರು ಹೋಬಳಿಯ ವಳಗೇರಹಳ್ಳಿ-ಅಣತಿ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬುಧವರ ಆಯೋಜಿಸಿದ್ದ ಗಂಗೆ ಪೂಜೆ, ಬಾಗಿನ ಅರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಸರ್ಕಾರದ ನೆರವಿನೊಂದಿಗೆ ತಾಲೂಕಿನಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಹಲವು ಕೆರೆ-ಕಟ್ಟೆ ತುಂಬಿಸಿದ್ದಾರೆ. ಇದರಿಂದ ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಕರೆಕಟ್ಟೆಗಳನ್ನು ತುಂಬಿಸುವುದರಿಂದ ಆರ್ಥಿಕವಾಗಿ ರೈತರು ಸದೃಢಗೊಳ್ಳುವ ಜತೆಗೆ ತಾಲೂಕು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ವಳಗೇನಹಳ್ಳಿ-ಅಣತಿ ಗ್ರಾಮದ ದೊಡ್ಡಕೆರೆ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿದ್ದು, ಜಿಲ್ಲೆಯಲ್ಲೇ ಎರಡನೇ ಅತಿದೊಡ್ಡ ಕೆರೆಯಾಗಿದೆ. ಕಳೆದ ಹಲವು ವರ್ಷಗಳಿಂದ ನವಿಲೆ ಏತನೀರಾವರಿ ಯೋಜನೆಯಿಂದ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದೆ. ಕಳೆದ ವಾರ ಹೆಚ್ಚು ಮಳೆ ಆಗಿದ್ದರಿಂದ ನಿರೀಕ್ಷೆಗಿಂತ ಮುಂಚೆಯೇ ಕೆರೆ ತುಂಬಿದೆ. ಈ ಕೆರೆ ತುಂಬಿರುವುದರಿಂದ ಕೇವಲ ನಮ್ಮ ತಾಲೂಕು ಅಲ್ಲದೆ ಗಂಡಸಿ ಸೇರಿದಂತೆ ತಿಪಟೂರು ತಾಲೂಕು ಭಾಗದ ರೈತರಿಗೂ ಹೆಚ್ಚು ಅನುಕೂಲವಾಗಲಿದೆ. ತಾಲೂಕಿನಲ್ಲಿ ಪ್ರಥಮ ಆದ್ಯತೆಯಾಗಿ ಕಳೆದ ಮೂರು ಅವಧಿಗಳಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರರ್ಮೂರ್ತಿ, ಶ್ರೀ ಕಾಲಭೈರವೇಶ್ವರ ಸೇವಾ ಸಮಿತಿ ಅಧ್ಯಕ್ಷ ಬೋರ್ವೆಲ್ ರಾಮಚಂದ್ರು, ಕೃಷಿ ಪತ್ತಿನ ನಿರ್ದೇಶಕ ವಿ.ಸಿ.ಗಿರೀಶ್, ಮುಖಂಡರಾದ ಜಯರಾಮಣ್ಣ, ಎ.ಡಿ.ಶಿವೇಗೌಡ, ಹುಲಿಕೆರೆ ಸಂಪತ್‌ಕುಮಾರ್, ಗಿರೀಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.