ಹಾನಗಲ್ಲ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಉಪತಹಸೀಲ್ದಾರ್ ಟಿ.ಕೆ. ಕಂಬಾಳಿ ಮೂಲಕ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ 9 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತಂತೆ ಕೃಷಿ ಇಲಾಖೆಯಲ್ಲಿ ಕೇವಲ ಒಂದೇ ಪ್ರಕರಣ ದಾಖಲಾದ ಕುರಿತು ಮಾಹಿತಿಯಿದೆ. ರೈತರ ಆತ್ಮಹತ್ಯೆಗಳನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು ಎಂದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ಮಾವು ಬೆಳೆಗೆ ಪ್ರತಿ ಬಾರಿ ಹಿಂಗಾರು ಹಂಗಾಮಿನಲ್ಲಿ ಕಂತು ತುಂಬುವ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಮುಂಗಾರು ಹಂಗಾಮಿನಲ್ಲೇ ಕಂತು ತುಂಬಲು ಅಧಿಸೂಚನೆ ನೀಡಿರುವುದರಿಂದ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಮಧ್ಯಂತರ ಬೆಳೆಗಳ ವಿಮೆ ಕಂತು ಪಾವತಿಸಲು ಸಮಸ್ಯೆ ಎದುರಾಗಿದೆ. ಇದನ್ನು ಮರು ಪರಿಶೀಲಿಸಬೇಕು. ಕಳೆದ ವರ್ಷದ ಅಡಕೆ ಬೆಳೆಹಾನಿ ಪರಿಹಾರದ 1561 ಪ್ರಕರಣಗಳು 7 ತಿಂಗಳಾದರೂ ಇನ್ನೂ ತಹಸೀಲ್ದಾರರ ಲಾಗಿನ್‌ನಲ್ಲೇ ಉಳಿದುಕೊಂಡಿದ್ದು, ಕೂಡಲೇ ಅವುಗಳಿಗೆ ಅನುಮೋದನೆ ನೀಡಬೇಕು ಎಂದರು.
ಸಂಘದ ಪದಾಧಿಕಾರಿಗಳಾದ ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ರಾಜೀವ ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ಶಂಭುಗೌಡ ಪಾಟೀಲ, ಅಜ್ಜನಗೌಡ ಕರೇಗೌಡ್ರ, ಷಣ್ಮುಖ ಅಂದಲಗಿ, ಮಾಲತೇಶ ಕಲ್ಲಿಕರೆಣ್ಣನವರ, ಉಮೇಶ ಮೂಡಿ, ರಾಮಪ್ಪ ಕೋಟಿ, ಬಾಬಣ್ಣ ವರ್ದಿ, ನಿಂಗನಗೌಡ ಪಾಟೀಲ, ಜಗದೀಶ ಭಂಗಿ, ಮೂಕಯ್ಯ ಗುರುಲಿಂಗಮ್ಮನವರ ಇತರರು ಉಪಸ್ಥಿತರಿದ್ದರು.