ಜಿಲ್ಲೆ

ಒಣಗಿದ ಉಳ್ಳಾಗಡ್ಡಿ, ಮುದುಡಿದ ಮೆಣಸಿನಕಾಯಿ

ನರೇಗಲ್ಲ: ತೇವಾಂಶ ಕೊರತೆಯಿಂದ ಉಳ್ಳಾಗಡ್ಡಿ ಬೆಳೆ ಬಾಡುತ್ತಿದೆ. ಮೆಣಸಿನಕಾಯಿಗೆ ಮುಟಗಿ ರೋಗ ಕಾಣಿಸಿಕೊಂಡಿದ್ದು, ರೈತರಿಗೆ ನುಂಗಲಾರದ ತುತ್ತಾಗಿದೆ.

ಮುಂಗಾರಿನ ಆರಂಭದಲ್ಲಿ ಭೂಮಿಯಲ್ಲಿ ಸಾಕಷ್ಟು ತೇವಾಂಶವಿಲ್ಲದಿದ್ದರೂ ಮುಂದೆ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನರೇಗಲ್ಲ, ಅಬ್ಬಿಗೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಯರೇಬೇಲೇರಿ, ನಾಗರಾಳ, ಮಾರನಬಸರಿ, ಜಕ್ಕಲಿ, ಬೂದಿಹಾಳ, ಹೊಸಳ್ಳಿ, ಕಳಕಾಪುರ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ ಸೇರಿದಂತೆ ಹೋಬಳಿಯ ವ್ಯಾಪ್ತಿಯಲ್ಲಿ 7000 ಹೆಕ್ಟೇರ್‌ನಲ್ಲಿ ಉಳ್ಳಾಗಡ್ಡಿ ಹಾಗೂ 1100 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ, 2500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 3500 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ತೇವಾಂಶದ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿವೆ. ಮಳೆಗಾಗಿ ರೈತರು ಆಗಸದತ್ತ ಮುಖ ಮಾಡಿ ಕುಳಿತಿದ್ದಾರೆ.

ಮೆಣಸಿನಕಾಯಿಗೆ ಮುಟಗಿ ರೋಗ: ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಬ್ಯಾಡಗಿ ತಳಿ, ಸಂಕೇಶ್ವರ ತಳಿ, ಸ್ಥಳೀಯ ತಳಿಗಳು ಅಲ್ಲದೆ ಸುಧಾರಿತ ತಳಿಗಳಾದ ಎನ್‌ಪಿ-16ಎ, ಪೊಸಾ ಜ್ವಾಲಾ, ಆರ್ಕಾ ಲೋಹಿತ್, ಕೆಡಿಎಸ್‌ಸಿ 1 ಮತ್ತು ಭಾಗ್ಯಲಕ್ಷ್ಮೀ ಜಿ4 ಸೇರಿ ಮತ್ತಿತರ ತಳಿಗಳ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ಮೆಣಸಿನಕಾಯಿ ಗಿಡಗಳಿಗೆ ಮುಟಗಿ ರೋಗ ತಗುಲಿದೆ.

ಕೈ ಹಿಡಿಯದ ಶೇಂಗಾ: ಮಸಾರಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುವ ಶೇಂಗಾ ಮಳೆಯ ಕೊರತೆಯಿಂದ ಹೇಳ ಹೆಸರಿಲ್ಲದಂತಾಗಿದೆ. ಮಘ ಮಳೆಯಾದರೆ ಮಾತ್ರ ಶೇಂಗಾ ಕಾಯಿ ಕಟ್ಟುತ್ತವೆ. ಆದರೆ, ಪ್ರಸಕ್ತ ವರ್ಷ ಮಘ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಶೇಂಗಾ ಬಳ್ಳಿಗಳಲ್ಲಿ 2-3 ಕಾಯಿಗಳು ಮಾತ್ರ ಕಾಣಸಿಗುತ್ತಿವೆ.

ವರ್ಷದಿಂದ ವರ್ಷಕ್ಕೆ ಬಿತ್ತನೆ ಬೀಜ, ಗೊಬ್ಬರ, ಔಷಧಗಳ ಬೆಲೆ ಗಗನಮುಖಿಯಾಗುತ್ತಿದೆ. ಪ್ರತಿ ಎಕರೆ ಉಳ್ಳಾಗಡ್ಡಿ ಬೆಳೆಯಲು 10 ಸಾವಿರ, ಶೇಂಗಾ ಬೆಳೆಯಲು 15 ಸಾವಿರ, ಗೋವಿನಜೋಳ, 10 ಸಾವಿರ, ಮೆಣಸಿನಕಾಯಿ 15 ಸಾವಿರ ರೂಪಾಯಿ ಖರ್ಚು ಬರುತ್ತದೆ. ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ಬಾಡುತ್ತಿವೆ. ಕಣ್ಣಮುಂದೆ ಬೆಳೆಗಳು ಬಾಡುತ್ತಿರುವುದನ್ನು ನೋಡಿ ರೈತರು ಮರುಗುವಂತಾಗಿದೆ.

ರೋಣ, ಹೊಳೆಆಲೂರು, ನರೇಗಲ್ಲ ಸೇರಿ ತಾಲೂಕಿನಾದ್ಯಂತ ಮುಂಗಾರು ಮಳೆಯ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳಿಗೆ ರೋಗಗಳು ಕಾಣಿಸಿಕೊಂಡಿವೆ. ಅವೈಜ್ಞಾನಿಕ ಬಿತ್ತನೆ ಕ್ರಮ, ಅಕಾಲಿಕ ಮಳೆ, ವಾಡಿಕೆಗಿಂತ ಕಡಿಮೆ ಮಳೆ, ಮೋಡ ಕವಿದ ವಾತಾವರಣದಿಂದ ರೋಗ ಹಾಗೂ ಕೀಟಗಳು ಹೆಚ್ಚಾಗುತ್ತವೆ. ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ತಿಳಿಸಲಾಗುತ್ತಿದೆ.-ಗಿರೀಶ ಹೋಸೂರ, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ, ರೋಣ