ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ರೈತರು ಸಾವಿರಾರು ದಿನಗಳಿಂದ ನಡೆಸುತ್ತಿರುವ ಧರಣಿ ಸೋಮವಾರ ಜಿಲ್ಲಾಡಳಿತ ಭವನದ ಆವರಣಕ್ಕೆ ಸ್ಥಳಾಂತರವಾಗಿದೆ,
ಸುಮಾರು ಮೂರು ತಿಂಗಳಿಗಾಗುವಷ್ಟು ದವಸ ಧಾನ್ಯದೊಂದಿಗೆ ಜಿಲ್ಲಾಡಳಿತ ಭವನದತ್ತ ಹೋರಾಟಗಾರರು ಪಾದಯಾತ್ರೆ ಬೆಳೆಸಿದರು.
1078 ದಿನಗಳಿಂದ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ರೈತರು ಧರಣಿ ನಡೆಸುತ್ತಿದ್ದು, ರಾಜ್ಯ, ರಾಷ್ಟ್ರ ನಾಯಕರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಸಾಥ್ ನೀಡಿದ್ದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ್ದ ಹೋರಾಟ ಸ್ಥಳಕ್ಕೆ ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಆಗಮಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಭೂ ಸ್ವಾಧೀನ ಪ್ರಕ್ರಿಯೆ ಹಿಂಪಡೆಯುವುದಾಗಿ ಆಶ್ವಾಸನೆ ನೀಡಿದ್ದರು. ಅಲ್ಲದೆ ಕೈಗಾರಿಕೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಹಲವು ಸಭೆ ನಡೆದಿದ್ದು, ಯಾವುದೂ ಫಲ ನೀಡದ ಕಾರಣ ಜಿಲ್ಲಾಡಳಿತ ಭವನದ ಆವರಣಕ್ಕೆ ಹೋರಾಟ ಶಿಫ್ಟ್ ಮಾಡಲಾಗಿದೆ.
ರೈತ ಸಂಘದ ಕೆ.ಟಿ.ಗಂಗಧಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಪ್ರಾಂತ ರೈತ ಸಂಘದ ಯಶವಂತ್, ನೀರಾವರಿ ಹೋರಾಟಗಾರ ಅಂಜಿನೇಯ ರೆಡ್ಡಿ, ರೈತ ಮುಖಂಡ ಜಿ.ಜಿ ಹಳ್ಳಿ ನಾರಾಯಣಸ್ವಾಮಿ,ಚಂದ್ರತೇಜಸ್ವಿ, ಪ್ರಭಾ ಬೆಳವಗಲ, ಕಾರ್ಮಿಕ ಮುಖಂಡರಾದ ನರಸಿಂಹ ಮೂರ್ತಿ, ಗೋಪಾಲ್ ಗೌಡ, ರಾಜ್ಯ ರೈತ ಸಂಘ ವೆಂಕಟನಾರಾಯಣಪ್ಪ, ಮುನಿಶಾಮಪ್ಪ, ಶಶಿಧರ್, ಕರವೇ ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಚನ್ನರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ,ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಚನ್ನರಾಯಪಟ್ಟಣ ಅಶ್ವತ್ಥಪ್ಪ, ತಿಮ್ಮರಾಯಪ್ಪ, ಚಿಮಾಚನಹಳ್ಳಿ ರಾಮಚಂದ್ರಪ್ಪ, ಮುಂಕುದ, ಸೋಮತ್ತನಹಳ್ಳಿ ಸುಬ್ರಮಣಿ ಇದ್ದರು.
ಭೂ ಸ್ವಾಧೀನ ಪ್ರಕ್ರಿಯೆಗೆ ತಾತ್ಕಾಲಿಕ ತಡೆ
ಹಿಂದೆ ಇದ್ದ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಅವರು ರೈತರ ಪರವಾಗಿ ಇರುತ್ತೇನೆ ಎಂದು ಸಾಕಷ್ಟು ಸಭೆಗಳನ್ನು ನಡೆಸಿ, ಸರ್ಕಾರದೊಂದಿಗೆ ನಡೆದ ಸಭೆಯಲ್ಲಿ ಭಾಗಿಯಾಗಿ ರೈತ ಹೋರಾಟದ ಕುರಿತು ಸರ್ಕಾರದ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದರ ನಡುವೆಯೇ ಕೆಐಎಡಿಬಿ ಅಧಿಕಾರಿಗಳು 13 ಹಳ್ಳಿಗಳ ಪೈಕಿ 2 ಹಳ್ಳಿಗಳ ಜಮೀನು ಸರ್ವೇ ಮಾಡಿದ್ದರು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ತಡೆ ಸಿಕ್ಕಿದೆ ಎಂದು ರೈತ ಮುಖಂಡರು ಹೇಳಿದರು.
ಕೃಷಿ ಭೂಮಿ ಮೇಲೆ ಏಕೆ ವ್ಯಾಮೋಹ?
ಸರ್ಕಾರ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಬರಡು ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ನಮ್ಮ ವಿರೋಧವಿಲ್ಲ. ಆದರೆ, ಫಲವತ್ತಾದ ಕೃಷಿ ಭೂಮಿಯಲ್ಲಿ ಸ್ಥಾಪಿಸುವುದು ಯಾವ ನ್ಯಾಯ? ಇವರಿಗೆ ದೇವನಹಳ್ಳಿ ಸುತ್ತಮುತ್ತಲಿನ ಜಮೀನಿನ ಮೇಲೆ ಏಕಿಷ್ಟು ವ್ಯಾಮೋಹ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಪ್ರಶ್ನಿಸಿದರು.
ಪರಿಹಾರ ಸೂಚಿಸಿಲ್ಲ
ನೂತನ ಜಿಲ್ಲಾಧಿಕಾರಿ ಎ.ಬಿ.ಬಸವರಾಜ್ ಅವರು ನಾನೊಬ್ಬ ರೈತನ ಮಗ. ನಾನು ರೈತ ಪರವಾಗಿ ಇರುತ್ತೇನೆ. ನಿಮ್ಮ ನ್ಯಾಯಯುತ ಹೋರಾಟವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೋರಾಟ ಸ್ಥಳಕ್ಕೆ ಬಂದು ಭಾಷಣ ಮಾಡಿ ಹೋಗಿದ್ದಾರೆ. ಅಧಿಕಾರಿಗಳು ಸರ್ಕಾರವನ್ನು ಮೆಚ್ಚಿಸಿ ರೈತರ ಕಣ್ಣೊರೆಸುವ ತಂತ್ರ ಪಾಲಿಸುತ್ತಿದ್ದಾರೆ. ಭೂ ಸ್ವಾಧೀನ ಸಮಸ್ಯೆಗೆ ಕಳೆದ 1078 ದಿನಗಳಿಂದ ಯಾರಿಂದಲೂ ಪರಿಹಾರ ಸೂಚಿಸಲು ಸಾಧ್ಯವಾಗಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ
ಇಂದಿನ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಬಂಡವಾಳಶಾಹಿಗಳ ಹಿತ ಕಾಪಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ರೈತರು, ಬಡವರು, ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಜನರು ಮತಗಳನ್ನು ಮಾರಿಕೊಳ್ಳದೆ ನಮ್ಮ ಹಿತ ಕಾಯುವ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಈ ಬದಲಾವಣೆ ತಳಹಂತದಿಂದಲೇ ಪ್ರಾರಂಭ ಆಗಬೇಕು. ಆಗ ಸಮಾಜದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಭೂ ಸ್ವಾಧೀನ ಹೋರಾಟ ಸಮಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಅನವಶ್ಯಕವಾಗಿ ತೊಂದರೆಗೆ ದೂಡುತ್ತಿದೆ. ಇದರ ವಿರುದ್ಧ ನಾವು ಶಿಸ್ತು ಮತ್ತು ಬದ್ಧತೆಯಿಂದ ಮುನ್ನಡೆಯಬೇಕು. ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಮತ್ತು ಅವಶ್ಯಕತೆ ನಮಗಿದೆ. -ಆಂಜನೇಯರೆಡ್ಡಿ ನೀರಾವರಿ ಹೋರಾಟಗಾರ