ಜಿಲ್ಲೆ

ಸಮರ್ಪಕ ವಿದ್ಯುತ್‌ಗಾಗಿ ರೈತರ ಹೋರಾಟ

ವೀರೇಶ ಸೌದ್ರಿ

ಹಿರೇಕೆರೂರ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಈ ವರ್ಷ ಮುಂಗಾರು ಮಳೆ ತಡವಾಗಿದ್ದರಿಂದ ಎರಡು ಬಾರಿ ಬಿತ್ತನೆ ಮಾಡಲಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಸಂಪೂರ್ಣವಾಗಿ ಮಳೆ ಕೈಕೊಟ್ಟಿದ್ದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದ್ದ ಬೆಳೆ ಳಿಸಿಕೊಳ್ಳಬೇಕೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಯಲ್ಲಿ ಮಗ್ನವಾಗಿದೆ. 2017ರಿಂದ ಬಾಕಿ ಇರುವ ಅಕ್ರಮ ಸಕ್ರಮ ಯೋಜನೆಯಡಿ ಹಣ ತುಂಬಿದವರಿಗೆ ಕೂಡಲೆ ಕಂಬ, ಟಿಸಿ ಕೊಡಬೇಕು. ಹಗಲು ಹೊತ್ತು 7 ತಾಸು ವಿದ್ಯುತ್ ಪೂರೈಸಬೇಕು. ಅವಶ್ಯಕತೆಗೆ ತಕ್ಕಂತೆ ಲೈನ್‌ಮನ್ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ ಮಾತನಾಡಿ, ಈಗಾಗಲೇ ನಿಟ್ಟೂರು, ನಿಡನೇಗಿಲು, ಕುಡಪಲಿ, ಕೋಡಮ ಹಳ್ಳೂರು ಗ್ರಾಮಗಳಿಗೆ 110 ಕೆ.ವಿ ಗ್ರಿಡ್ ಮಂಜೂರಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ನಾಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಮಹ್ಮದಗೌಸ್ ಪಾಟೀಲ, ಶಂಕ್ರಪ್ಪ ಶಿರಗಂಬಿ, ಗಂಗನಗೌಡ ಮುದಿಗೌಡ್ರ, ಶಂಭಣ್ಣ ಮುತ್ತಗಿ, ಶಿವಾನಂದಯ್ಯ ಹಳ್ಳೂರಮಠ, ಶಾಂತನಗೌಡ ಪಾಟೀಲ, ಮಂಜುನಾಥ ಹಾರಿಕಟ್ಟಿ, ಪುಟ್ಟಯ್ಯ ಮಳಲಿಮಠ, ಕರಿಬಸಪ್ಪ ಬಣಕಾರ, ಈಶಣ್ಣ ಕರ್ಜಿ, ಗುರುರಾಜ ಸಿದ್ದಪ್ಪಗೌಡ್ರ, ಶಾಂತನಗೌಡ ಶಂಕ್ರನಹಳ್ಳಿ, ಸೋಮಪ್ಪ ಮರಿಗೌಡ್ರ, ಉಜ್ಜನಗೌಡ ಹೊಟ್ಟಿಗೌಡ್ರ ಹಾಗೂ ರೈತರು ಇದ್ದರು.