ಜಿಲ್ಲೆ

ತಹಸೀಲ್ದಾರ್ ಕಚೇರಿ ಎದುರು ರೈತರ ಧರಣಿ ಇಂದಿನಿಂದ

ಬ್ಯಾಡಗಿ: ತಾಲೂಕನ್ನು ಬರಗಾಲ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು, ಮಧ್ಯಂತರ ಪರಿಹಾರ, ಶೇ. 25 ರಷ್ಟು ಬೆಳೆ ವಿಮೆ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡುವುದು, ಎಕರೆಗೆ 25 ಸಾ.ರೂ. ಬೆಳೆ ಪರಿಹಾರ ಘೊಷಣೆ ಮಾಡುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯ ಎದುರು ಅ. 5ರಿಂದ ಅನಿರ್ಧಿಷ್ಟಾವಧಿ ಚಳವಳಿ ಹಮ್ಮಿಕೊಂಡಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ತಹಸೀಲ್ದಾರ್ ಕಾರ್ಯಾಲಯ ಎದುರು ಬುಧವಾರ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ತಾಲೂಕಿನ ಕಂದಾಯ ಅಧಿಕಾರಿಗಳು, ಕೃಷಿ, ತೋಟಗಾರಿಕೆ ಸಹಾಯಕ ನಿರ್ದೇಶಕರ ನಿರ್ಲಕ್ಷವೇ ಬ್ಯಾಡಗಿ ತಾಲೂಕು ಬರಗಾಲ ಪಟ್ಟಿಯಿಂದ ಕೈಬಿಟ್ಟು ಹೋಗಲು ಕಾರಣವಾಗಿದೆ. ಅ. 5ರಿಂದ ತಹಸೀಲ್ದಾರ್ ಕಾರ್ಯಾಲಯ ಎದುರು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.

ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಧರಣಿ ಸತ್ಯಾಗ್ರಹಕ್ಕೆ ತಾಲೂಕಿನ 65 ಗ್ರಾಮಗಳಿಂದ ಸಾವಿರಾರು ರೈತರು ಆಗಮಿಸುತ್ತಾರೆ. ಅ.6 ರಿಂದ ಪ್ರತಿದಿನ 10 ಗ್ರಾಮಗಳ ರೈತರು ಆಗಮಿಸುತ್ತಾರೆ. ಎಲ್ಲ ಗ್ರಾಮಗಳ ಮಹಿಳಾ ಸಂಘದ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳು, ಕಲಾವಿದರು, ಕನ್ನಡಪರ ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೇಡಿಕೆ ಈಡೇರಿಸಿದಲ್ಲಿ ಮಾತ್ರ ಧರಣಿ ಕೈಬಿಡುತ್ತೇವೆ. ಸರ್ಕಾರ ಬರ ಪರಿಹಾರವನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಆದರೆ, ಸರ್ಕಾರ ಗ್ಯಾರಂಟಿ ಯೋಜನೆಗಳತ್ತ ಮುಖಮಾಡಿದೆ ಎಂದು ಆರೋಪಿಸಿದರು.

ರೈತ ಮುಖಂಡರಾದ ಗಂಗಣ್ಣ ಎಲಿ, ಮೌನೇಶ ಕಮ್ಮಾರ, ನಿಂಗಪ್ಪ ಹೆಗ್ಗಣದರ, ಎನ್.ಎಂ.ಅಜಗೊಂಡ್ರ, ಮಲ್ಲೇಶ ಡಂಬಳ, ಜಾನ ಪುನೀತ್, ನಂಜುಂಡಯ್ಯ ಹಾವೇರಿಮಠ ಇತರರಿದ್ದರು.