ಜಿಲ್ಲೆ

ಶಿಗ್ಗಾಂವಿ ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

Haveri

ಬಂಕಾಪುರ: ರೈತರ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಆಗ್ರಹಿಸಿ ಶಿಗ್ಗಾಂವಿ ತಾಲೂಕಿನ ದುಂಡಸಿ ಹೋಬಳಿ ಭಾಗದ ರೈತರು ಗುರುವಾರ ಶಿಗ್ಗಾಂವಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಬಸಲಿಂಗಪ್ಪ ನರಗುಂದ ಮಾತನಾಡಿ, ದುಂಡಸಿ ಭಾಗದ ಬಿ. ಬಸಾಪುರ ಮಾರ್ಗದಲ್ಲಿ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಪಂಪ್​ಸೆಟ್​ಗಳಿಗೆ ಪೂರೈಕೆಯಾಗುವ ವಿದ್ಯುತ್ ಕಡಿಮೆ ವೋಲ್ಟೇಜ್ ಇರುವುದರಿಂದ ಪಂಪ್​ಸೆಟ್​ಗಳಿಗೆ ಹಾನಿಯಾಗುತ್ತಿದೆ. ಅಲ್ಲದೆ, ಹಗಲು 4, ರಾತ್ರಿ 3 ತಾಸು ಪೂರೈಕೆಯಾಗಬೇಕಾದ ವಿದ್ಯುತ್, ಪದೇಪದೆ ವತ್ಯಯವಾಗುತ್ತಿರುವುದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು, ದುಂಡಸಿ ಭಾಗದ ರೈತರಿಗೆ 7 ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಶಿಗ್ಗಾಂವಿ ಹೆಸ್ಕಾಂ ಅಧಿಕಾರಿ ನಾಗರಾಜ ಕ್ಯಾಲಕೊಂಡ, ಸರ್ಕಾರದ ಆದೇಶದಂತೆ ಹಗಲು 4 ರಾತ್ರಿ 3 ತಾಸು ವಿದ್ಯುತ್ ಸಮರ್ಪಕವಾಗಿ ನೀಡುತ್ತಿದ್ದೇವೆ. ಅಲ್ಲದೆ, ವಿದ್ಯುತ್ ಕಡಿತಗೊಂಡಾಗ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಪವರ್ ಸ್ಟೇಷನ್​ನಿಂದ 110 ವೋಲ್ಟೇಜ್ ಬದಲಾಗಿ 105 ವೋಲ್ಟೇಜ್ ವಿದ್ಯುತ್ ಬರುತ್ತಿದ್ದು, ಇದು ರೈತರ ಪಂಪ್​ಸೆಟ್​ಗಳಿಗೆ ಪೂರೈಕೆ ಆಗುವಾಗ ಇನ್ನಷ್ಟು ಕಡಿಮೆ ಆಗುತ್ತಿದೆ. ಕೆಲ ಟ್ರಾನ್ಸ್​ಫಾರ್ಮರ್​ಗಳಿಗೆ ಹೆಚ್ಚು ಪಂಪ್​ಸೆಟ್ ಸಂಪರ್ಕ ಕಲ್ಪಿಸಿರುವುದರಿಂದ ಓವರ್​ಲೋಡ್​ನಿಂದ ಟಿಸಿಗಳು ಹಾಳಾಗಿ ಈ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಅನಧಿಕೃತ ಪಂಪ್​ಸೆಟ್​ಗಳ ಸಂಪರ್ಕ ಕಡಿತಗೊಳಿಸಿ, ನೋಂದಾಯಿತ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾಮಸ್ಥರಾದ ಈರಣ್ಣ ಸಮಗೊಂಡ, ಬಸವರಾಜ ಜೇಕಿನಕಟ್ಟಿ, ಸಂತೋಷ ಧರೆಣೆಪ್ಪನವರ, ಮಲ್ಲನಗೌಡ ಪಾಟೀಲ, ದರವೇಶ ಶಿರಗೋಡ, ಭರತೇಶ ದೀಪನ್ನವರ, ಮಹೇಶ ಕಮ್ಮಾರ, ರಮೇಶ ಗಂಗಣ್ಣವರ, ಗುರನಗೌಡ ಪಾಟೀಲ, ಈರಣ್ಣ ಕೋಳೂರ, ವಿಶಾಲ ಕೊಪ್ಪದ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.