ಜಿಲ್ಲೆ

ಹೇಮೆ ಹೋರಾಟಕ್ಕೆ ರೈತರ ಶಕ್ತಿ ಪ್ರದರ್ಶನ ಅಗತ್ಯ

 ಶಾಸಕ ಎಚ್.ಸಿ.ಬಾಲಕೃಷ್ಣ ಕರೆ | ವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಾಗಡಿ: ತಾಲೂಕಿನ ರೈತರೇನಾದರು ಇದ್ದರೇ ರಸ್ತೆ ತಡೆ ಹೋರಾಟಕ್ಕೆ ಭಾಗವಹಿಸಿ ನಮ್ಮ ಶಕ್ತಿ ಪ್ರದರ್ಶನ ತೋರಿಸಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಕರೆನೀಡಿದರು.

ಪಟ್ಟಣದ ಹಲವಾರು ವಾರ್ಡ್‌ಗಳಲ್ಲಿ ಸುಮಾರು 6 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜೂ. 5 ರಂದು ಮರೂರು ಹ್ಯಾಂಡ್ ಪೋಸ್ಟ್ ಬಳಿ ನಮ್ಮ ನೀರು ನಮ್ಮ ಹಕ್ಕು ಒತ್ತಾಯಿಸಿ ಬೆಂಗಳೂರು- ಮಂಗಳೂರು ರಸ್ತೆ ತಡೆ ನಡೆಸಲಾಗುವುದು. ಇದು ನನ್ನ ಮಗಳ ಮದುವೆ ಅಥವಾ ಕಾಂಗ್ರೆಸ್ ಕಾರ್ಯಕ್ರಮವಲ್ಲ. ಸಾರ್ವಜನಿಕ ಇತಾದೃಷ್ಠಿಯಿಂದ ಎಲ್ಲರೂ ಪಕ್ಷಾತೀತ ಭಾಗವಹಿಸಬೇಕು, ಈ ಹೋರಾಟಕ್ಕೆ ಎಷ್ಟು ಮಂದಿ ಭಾಗವಹಿಸುತ್ತಾರೆ. ಅದರ ಮೇಲೆ ತೀರ್ಮಾನವಾಗಲಿದೆ ಎಂದರು.

ತುಮಕೂರಿನ ನಾಯಕರು ಮತದ ಆಸೆಗಾಗಿ ತಮ್ಮ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಾಗಡಿ ತಾಲೂಕಿಗೆ ಹೇಮಾವತಿ ನೀರು ಎಷ್ಟು ಹಂಚಿಕೆಯಾಗಿದೆ. ಯಾವ ರೀತಿ ಕೊಡಬೇಕು, ಕೃಷ್ಣ ಜಲಾಯನ ಪ್ರದೇಶಕ್ಕೆ ಕಾವೇರಿ ನೀರನ್ನು ಅಲ್ಲಿಗೆ ಏಕೆ ಪಡೆದಿದ್ದಾರೆಂದು ಪ್ರತಿಭಟನೆಯಲ್ಲಿ ಮಾಹಿತಿ ಬಿಡುಗಡೆ ಮಾಡುತ್ತೇನೆ. ತುಮಕೂರಿನವರು ನಮ್ಮಜತೆ ಅನಾವಶ್ಯಕವಾಗಿ ಕಾಲು ಕೆರೆದುಕೊಂಡು ಜಗಳವಾಡುವುದು ಬೇಡ. ನಮಗೆ ಹಂಚಿಕೆಯಾದ ನೀರನ್ನು ನೀಡಲಿ, ಮಾಗಡಿಗೆ ನೀರು ಕಂಟ್ರೋಲ್ ಮಾಡುವ ಅಧಿಕಾರ ತುಮಕೂರಿನವರಿಗಿದೆ. ನೀರು ಹೆಚ್ಚು ಬಂದಾಗ ಬಿಡಬಹುದು, ನೀರು ಕಡಿಮೆಯಾದ ವೇಳೆ ನಿಲ್ಲಿಸಬಹುದು. ಇದರಿಂದಾಗಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಮಾವತಿ ನೀರನ್ನು ಕನಕಪುರ, ರಾಮನಗರ, ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗುತ್ತಾರೆಂದು ತುಮಕೂರಿನವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಜಿಲ್ಲೆಗೆ ಸೀಮಿತ ಎಂದು ಹೇಳಿದ್ದಾರೆ. ನಮಗೆ ಹಂಚಿಕೆಯಾದ ಮುಕ್ಕಾಲು ಟಿಎಂಸಿ ನೀರು ಕೊಡಲಿ ನಾವು ರೈತರು ನಾವು ಬದುಕಬೇಕು. ನಾವು ನಿಮ್ಮ ಅಣ್ಣ,ತಮ್ಮಂದಿರು ದಯಮಾಡಿ ನೀರನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಇದನ್ನು ಪಡೆಯುವವರೆಗೂ ಬಿಡುವುದಿಲ್ಲ, ನಾವು ಹೋರಾಟ ನಡೆಸುತ್ತೇವೆ ಎಂದರು.

ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ, ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ಉಪಾಧ್ಯಕ್ಷ ರಿಯಾಜ್, ಸದಸ್ಯರಾದ ಕೆ.ಕೆ.ಕಾಂತರಾಜು, ರಂಗಹನುಮಯ್ಯ, ಭಾಗ್ಯಮ್ಮ, ಪ್ರಕಾಶ್, ರಾಧಾ, ಮಾಜಿ ಸದಸ್ಯ ರಘು, ಗುರುಸ್ವಾಮಿ, ಗಂಗಣ್ಣ, ಗುತ್ತಿಗೆದಾರ ದೇವರಾಜು, ಪರಮಶಿವಯ್ಯ, ಡೇರಿ ಬಸವರಾಜು, ಶೇಖರ್ ಇತರರು ಇದ್ದರು.