ಇಂಡಿ: ತಾಲೂಕಿನ ಸಂಗೋಗಿ, ತಡವಲಗಾ, ನಿಂಬಾಳ ಕೆ.ಡಿ. ಹಂಜಗಿ ಕೆರೆಗಳಿಗೆ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸದ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತು.
ಸಂಗೋಗಿ ಕೆರೆಗೆ ಅಳವಡಿಸಿದ್ದ 25 ಮೋಟಾರ್ ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡಿ, ರೈತರು ಕೇವಲ ಕುಡಿಯಲು ಮಾತ್ರ ನೀರು ಬಳಸಬೇಕು. ರೈತರು ಕೃಷಿಗೆ ಬಳಸಿದರೆ ಎ್ಐಆರ್ ದಾಖಲಿಸಲಾಗುವುದೆಂದು ಎಸಿ ಅನುರಾಧಾ ತಾಕೀತು ಮಾಡಿದರು.
ಬೇಸಿಗೆ ಬೇಗೆಯ ಕಾವು ತಾಲೂಕಿನಾದಂತ ಏರುತ್ತಿರುವಂತೆಯೇ ತಾಲೂಕಿನಲ್ಲಿ ಜಲ ಸಂಕಟದ ಭೀತಿ ಎದುರಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಸದ್ಯ ಕೆರೆಯಲ್ಲಿನ ನೀರು ಕೇವಲ ಗ್ರಾಮಸ್ಥರಿಗೆ ಉಪಯೋಗಕ್ಕೆ ಮಾತ್ರ ಬಳಸಲು ಆದೇಶವಿದೆ ಎಂದು ತಿಳಿಸಿದರು.
ಮೇ ತಿಂಗಳಲ್ಲಿ ಜನ- ಜಾನುವಾರುಗಳು ಕುಡಿಯಲು ಕೆರೆಗಳಲ್ಲಿ ನೀರು ಸಂಗ್ರಹಿಸಲಾಗುತ್ತಿದೆ. ಅದನ್ನು ಕೃಷಿಗೆ ಬಳಸಿದರೆ ಮುಂದೆ ಕೆರೆ ತುಂಬಲು ಕಷ್ಟ. ಹೀಗಾಗಿ ಕೆರೆಯ ನೀರು ಬಳಸದಿರಲು ವಿನಂತಿಸಿದರು.
ತಾಪಂ ಇಒ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕಂದಾಯ ನಿರೀಕ್ಷಕ ಎಚ್.ಎಚ್. ಗುನ್ನಾಪುರ, ಪಿಡಿಒ ಅಶೋಕ ಹೊನವಾಡ, ಕ್ರೈಂ ಪಿ.ಎಸ್.ಐ ಎಸ್.ಬಿ. ಗಂಗನಹಳ್ಳಿ ಮತ್ತಿತರಿದ್ದರು.