ಮಡಿಕೇರಿ
ರೈತರು ಭತ್ತ ಕೃಷಿ ಪದ್ಧತಿಯನ್ನು ಮತ್ತಷ್ಟು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಭತ್ತ ಕೃಷಿ ಬಿಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದ ಮಾತಂಡ ಶಕು ಅಕ್ಕಮ್ಮ, ಮನು ಇವರ ಗದ್ದೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಬೇಲ್ ನಮ್ಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದಕ್ಷಿಣ ಭಾರತದಲ್ಲಿ ಭತ್ತ ಪ್ರಮುಖ ಆಹಾರ ಬೆಳೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಭತ್ತ ಕೃಷಿಯಿಂದ ವಿಮುಖರಾಗದೆ, ಭತ್ತ ಕೃಷಿಯನ್ನು ಮುಂದುವರೆಸಿಕೊಂಡು ಹೋಗಬೇಕು. ಭತ್ತ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಸಹ ಹಲವು ಸಹಾಯಧನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭತ್ತ ಬಿತ್ತನೆ ಬೀಜವನ್ನು ಸಹಾಯಧನದಡಿ ನೀಡಲಾಗುತ್ತದೆ. ಭತ್ತ ಬೆಳೆದ ನಂತರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದಿಂದ ಖರೀದಿಸಲಾಗುತ್ತದೆ. ಸಹಾಯಧನದಡಿ ಪವರ್ ಟಿಲ್ಲರ್, ಭತ್ತದ ನಾಟಿ ಯಂತ್ರ ಒದಗಿಸಲಾಗುತ್ತದೆ. ಕರ್ನಾಟಕ ಕೃಷಿ ಸಮೃದ್ಧಿ ಯೋಜನೆ ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನಗೊಳ್ಳಬೇಕಿದೆ ಎಂದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕೃಷಿ ಪದ್ದತಿಯನ್ನು ಉಳಿಸಿಕೊಂಡು, ಕೊಡವ ಸಂಸ್ಕೃತಿಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವುದು ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದ ಕೃಷಿ ಮಾಡುವುದು ವರ್ಷದಿಂದ ವರ್ಷಕ್ಕೆ ಕಷ್ಟವಾಗುತ್ತಿದೆ. ಅಂತರ್ಜಲ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿ ಕೃಷಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಆ ನಿಟ್ಟಿನಲ್ಲಿ ಭತ್ತ ಬೆಳೆಯುವುದು ಹೆಚ್ಚಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ಕಾಡಾನೆ ಹಾವಳಿಯಿಂದ ಭತ್ತ ಬೆಳೆಯುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಭತ್ತ ಬೆಳೆಯಲು ಉತ್ತೇಜಿಸುವಲ್ಲಿ ಹೆಚ್ಚಿನ ಸಹಾಯಧನ ಕಲ್ಪಿಸಬೇಕಿದೆ ಎಂದು ಸಲಹೆ ಮಾಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮಾತನಾಡಿ ಅಕಾಡೆಮಿ ವತಿಯಿಂದ ಕೃಷಿ, ಕಲೆ, ಸಂಸ್ಕೃತಿ, ಸಾಹಿತ್ಯ ಚಟುವಟಿಕೆಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಹೇಳಿದರು.
ಕೊಡಗು ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ.ಚೆಪ್ಪುಡಿರ ಜಿ.ಕುಶಾಲಪ್ಪ ಕೃಷಿ ಕ್ಷೇತ್ರದ ಬಗ್ಗೆ ಮಾತನಾಡಿದರು. ಬೊಳ್ಳುಮಾಡು ಗ್ರಾಮದ ಮಹಿಳಾ ಕೃಷಿಕರಾದ ಮಾತಂಡ ಶಕುಅಕ್ಕಮ್ಮ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.