ಶ್ರೀರಂಗಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಗ್ರೇಡ್-2 ತಹಸೀಲ್ದಾರ್ ಚೈತ್ರಾ ಇದ್ದರು. 
ಜಿಲ್ಲೆ

ವಕ್ಫ್ ವಿವಾದಗಳಿಗೆ ರೈತರು ಕಿವಿಗೊಡದಿರಲಿ

ಶ್ರೀರಂಗಪಟ್ಟಣ: ನನ್ನ ಕ್ಷೇತ್ರದ ರೈತರ ಜಮೀನನ್ನು ಅಕ್ರಮವಾಗಿ ಕಬಳಿಸಲು ಅಥವಾ ವಕ್ಫ್ ಮಂಡಳಿ ಗೊಂದಲಕ್ಕೆ ಸಿಲುಕಿಸಲು ಅವಕಾಶ ನೀಡದಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದ್ದು, ರೈತರು ಹಾಗೂ ಸಾರ್ವಜನಿಕರು ವಿವಾದಗಳಿಗೆ ಕಿವಿಗೊಡಬಾರದು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಕಂದಾಯ ದಾಖಲೆಗಳ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿದ ಬಳಿಕ ವಕ್ಫ್ ವಿಚಾರವಾಗಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರೊಂದಿಗೆ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕಲಂ 9, 12 ಅನ್ನು ಕಂದಾಯ ಇಲಾಖೆ ಬಗೆಹರಿಸಲಿದೆ. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಅದನ್ನು ಕಂದಾಯ ಇಲಾಖೆ ಗಮನಕ್ಕೆ ತರಬೇಕು. ಒಂದು ವೇಳೆ ಇಲ್ಲದಿದ್ದರೂ ಕಂದಾಯ ಇಲಾಖೆಯೇ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಅಂತಹ ಸಮಸ್ಯೆಗಳನ್ನು ತಿಂಗಳೊಳಗೆ ಪರಿಹರಿಸಿಕೊಡಲಿದೆ ಎಂದು ತಿಳಿಸಿದರು.

ತಾಲೂಕು ವ್ಯಾಪ್ತಿಯಲ್ಲಿನ ವಕ್ಫ್ ಮಂಡಳಿ ಆಸ್ತಿಗಳ ವಿಚಾರದಲ್ಲಿರುವ ಗೊಂದಲಗಳನ್ನು ಈಗಾಗಲೇ ಎಸಿ ಕಚೇರಿ ಮೂಲಕ ಪರಿಹರಿಸಿ ಅಂತಿಮವಾಗಿ ಸರಿಪಡಿಸಿದ್ದು, ಕೋಮು ಸಂಘರ್ಷ ಪ್ರಚೋದಿತ ವಿವಾದಗಳಿಗೆ ಕಿವಿಕೊಡಬಾರದು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿದರಲ್ಲದೆ, ಕಂದಾಯ ದಾಖಲೆಗಳನ್ನು ಸುರಕ್ಷತೆ ಹಾಗೂ ಸೂಕ್ಷ್ಮವಾಗಿ ಡಿಜಿಟಲೀಕರಣಗೊಳಿಸುವ ಮೂಲಕ ಜನರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಸರಳಿಗೊಳಿಸಲು ಸೂಚನೆ ನೀಡಿದರು.

ಫೆ.28ರಂದು ಸರ್ಕಾರದ ಆಶ್ರಯ ಯೋಜನೆಯ ಕಾರ್ಯಕ್ರಮ ನಡೆಯಲಿದೆ. ತಾಲೂಕಿನ ಗಣಂಗೂರು, ಹೊಸಹಳ್ಳಿ, ಪಾಲಹಳ್ಳಿ, ಹುಲಿಕೆರೆ, ಮೊಗರಹಳ್ಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಸ್ಥಳಗಳನ್ನು ಗುರುತಿಸಿ ಒಂದೂವರೆ ತಿಂಗಳಲ್ಲಿ ಕ್ಷೇತ್ರದ ನಿವೇಶನ ರಹಿತ ಜನರಿಗೆ ವಿತರಿಸಲು 1 ಸಾವಿರ ನಿವೇಶನ ಗುರುತು ಮಾಡಬೇಕು. ಜತೆಗೆ ಕೆ.ಆರ್.ಸಾಗರ ವ್ಯಾಪ್ತಿಯಲ್ಲಿ 94 ಸಿ ಮತ್ತು ಡಿ ಅಡಿ ಹಕ್ಕುಪತ್ರ ವಿತರಣೆಯಲ್ಲಿ ಇಒ ಅವರೊಂದಿಗೆ ಜಂಟಿಯಾಗಿ ತ್ವರಿತ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಕೆಲಸ ಮಾಡಲಾಗದವರು ಕ್ಷೇತ್ರ ಬಿಟ್ಟು ತೊಲಗಿ: ತಾಲೂಕು ಆಡಳಿತದ ಮೇಲೆ ದಿನದಿಂದ ದಿನಕ್ಕೆ ಜನರ ಆರೋಪಗಳು ಹೆಚ್ಚಾಗತೊಡಗಿದೆ. ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಡಳಿತದ ವಿರುದ್ಧ ಶಾಸಕರು ಅಸಮಾಧಾನ ಹೊರಹಾಕಿದರು.

ತಾಲೂಕಿನ ಜನರ ಸಮಸ್ಯೆಗಳಿಗೆ ಅಧಿಕಾರಿ-ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಬೇಕು. ಆ ರೀತಿ ಕೆಲಸ ಮಾಡಲು ಸಾಧ್ಯವಾಗದವರು ನನ್ನಿಂದ ಕ್ರಮಕ್ಕೆ ಒಳಗಾಗದೆ ನೀವೇ ಈ ಕ್ಷೇತ್ರ ಬಿಟ್ಟು ಹೊರಟುಹೋಗಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಗ್ರೇಡ್-2 ತಹಸೀಲ್ದಾರ್ ಚೈತ್ರಾ, ಎಡಿಎಲ್‌ಆರ್ ಮೇಘಾ, ಉಪತಹಸೀಲ್ದಾರ್‌ಗಳಾದ ಡಾ.ನವೀನ್, ದಿನೇಶ್, ವರುಣ್, ಸುಧಾಮಣಿ, ಶಿರಸ್ತೇದಾರ್ ನಾಗೇಶ್, ರಾಜಸ್ವ ನೀರಿಕ್ಷಕರಾದ ಭಾಸ್ಕರ್, ರೇವಣ್ಣ, ಮಂಜುನಾಥ್, ಪುಟ್ಟಸ್ವಾಮಿ ಇತರರಿದ್ದರು.