ಜಿಲ್ಲೆ

ರೈತರು ನೀರಿನ ಮಿತ ಬಳಕೆಗೆ ಒತ್ತು ನೀಡಿ

ಗುಂಡ್ಲುಪೇಟೆ: ರೈತರು ನಿಯಮಿತವಾಗಿ ನೀರಿನ ಬಳಕೆ ಮಾಡುವ ಮೂಲಕ ನೀರಿನ ಪೋಲು ತಡೆಗಟ್ಟುವ ಜತೆಗೆ ಬೆಳೆಗಳ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸುಭಾಷ್ ಪಾಳೇಕರ್ ಕೃಷಿ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಭಾನುವಾರ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯಾವುದೇ ರಾಸಾಯನಿಕಗಳನ್ನು ಬಳಸದೆ ಮಾಡುವ ನೈಸರ್ಗಿಕ ಕೃಷಿಯಲ್ಲಿ ನಾಟಿ ಹಸುಗಳ ಪಾತ್ರ ಪ್ರಮುಖವಾಗಿದೆ. ಒಂದು ನಾಟಿ ಹಸುವಿನಿಂದ ಸುಮಾರು 30 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಮಾಡಲು ಸಾಧ್ಯವಿದೆ. ರೈತರು ತಮ್ಮ ಕೃಷಿ ಭೂಮಿ ಮತ್ತು ಸುತ್ತಲಿನ ಪರಿಸರದಲ್ಲಿ ಸಿಗುವ ಕಚ್ಚಾ ಪದಾರ್ಥಗಳಿಂದ ಜೀವಾಮೃತ ತಯಾರಿ ಮಾಡಿಕೊಳ್ಳುವುದರಿಂದ ಗೊಬ್ಬರ ಮತ್ತು ಕ್ರಿಮಿನಾಶಕಗಳಿಗೆ ಮಾಡುವ ಖರ್ಚನ್ನು ಉಳಿಸಬಹುದು. ಅಲ್ಲದೆ ಬೀಜಾಮೃತ ತಯಾರಿಸಿ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು. ಅಂತರ್ಜಲ ಆಶ್ರಯಿಸಿ ಕೃಷಿ ಮಾಡಿದರೂ ರೈತರು ಹೆಚ್ಚಿನ ನೀರನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ನಿಯಮಿತವಾಗಿ ನೀರಿನ ಬಳಕೆ ಮಾಡುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು. ಮಿತವಾಗಿ ನೀರುಣಿಸುವುದರಿಂದ ಬೆಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ನಮ್ಮ ಆಹಾರ ಪದ್ಧತಿ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಇರಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ, ಮೂಡುಗೂರು ಮಠಾಧ್ಯಕ್ಷರಾದ ಇಮ್ಮಡಿ ಉದ್ದಾನಸ್ವಾಮೀಜಿ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನಪ್ಪ, ವಡ್ಡಗೆರೆ ಗ್ರಾಮಪಂಚಾಯಿತಿ ಸದಸ್ಯ ಚನ್ನಬಸಪ್ಪ, ಪ್ರಗತಿಪರ ರೈತರಾದ ಸಂಪತ್, ಶಶಿಧರ್, ಯರಿಯೂರು ಸಂತೋಷ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚಿನ ರೈತರು ಪಾಲ್ಗೊಂಡಿದ್ದರು.