ಜಿಲ್ಲೆ

ರೈತರು ರಾಜಕೀಯದಲ್ಲೂ ಪ್ರಬುದ್ಧರಾಗಲಿ: ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ

ಮೈಸೂರು: ರೈತರು ರಾಜಕಾರಣದಲ್ಲಿಯೂ ಪ್ರಬುದ್ಧರಾಗಬೇಕು. ಜಾತಿ, ಧರ್ಮವನ್ನು ಹೊರಗಿಟ್ಟು ಕೃಷಿ ಪ್ರಗತಿಗೆ ಆದ್ಯತೆ ನೀಡುವವರನ್ನು ಆಯ್ಕೆ ಮಾಡಬೇಕು ಎಂದು ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಹೇಳಿದರು.

ವಿಶ್ವ ರೈತ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ದಿನದಲ್ಲಿ ‘ಆರಂಭ’ ಸಂಸ್ಮರಣಾ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮತ ಪೆಟ್ಟಿಗೆ ಮೇಲೆ ಹಕ್ಕು ಸಾಧಿಸುವುದು ಮಾರುಕಟ್ಟೆ ಹಿಡಿತಕ್ಕೆ ಮುನ್ನುಡಿಯಾಗುತ್ತದೆ. ಹಾಗಾಗಿ ರೈತರು ಕೃಷಿ ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳಬೇಕು. ಮತಪೆಟ್ಟಿಗೆ ಮೇಲೆ ಹಕ್ಕು ಸಾಧಿಸಬೇಕು. ಆಗ ರೈತರು ಸಮಸ್ಯೆಗಳು ಪರಿಹಾರ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಬೇಡುವುದಲ್ಲ, ಬೆಲೆಯನ್ನು ನಿಗದಿ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಗ್ರಾಹಕರು ನೀಡುವ ಬೆಲೆಯಲ್ಲಿ ರೈತರಿಗೆ ನ್ಯಾಯಯುತ ಪಾಲು ದೊರೆಯುತ್ತಿಲ್ಲ. ಗ್ರಾಹಕರು ಮಾರುಕಟ್ಟೆಯಲ್ಲಿ ಇಂದು ಕೊಂಡುಕೊಳ್ಳುವ ಬೆಲೆಯಲ್ಲಿ ಶೇ.32 ರಷ್ಟು ಮಾತ್ರ ರೈತರಿಗೆ ದೊರೆಯುತ್ತಿದೆ. ಉಳಿದ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಇಂಥ ಅಸಮಾನತೆ ಬೇರೆ ಯಾವ ಉದ್ಯಮದಲ್ಲೂ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಹಾಗಾಗಿ ರೈತರು ರಾಜಕಾರಣದಲ್ಲಿಯೂ ಪ್ರಬುದ್ಧರಾಗಬೇಕು. ಜಾತಿ, ಧರ್ಮ ಎಂದು ಸೀಮಿತವಾಗದೆ ಅದರಾಚೆಗೆ ರೈತರ ಹಿತ ಕಾಯುವವರನ್ನು ಕೃಷಿ ಪ್ರಗತಿಗೆ ಆದ್ಯತೆ ನೀಡುವವರನ್ನು ಆಯ್ಕೆ ಮಾಡಬೇಕು. ಈ ಮೂಲಕ ಮತಪೆಟ್ಟಿಗೆ ಮೇಲೆ ರೈತರು ಹಕ್ಕು ಸಾಧಿಸಲು ಮುಂದಾಗಬೇಕು ಎಂದು ಹೇಳಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಹಳೆ ಮೈಸೂರು ಭಾಗವು ನೀರಾವರಿಯ ಸಂಪೂರ್ಣ ಸೌಲಭ್ಯ ಪಡೆಯುವ ಸಾಮರ್ಥ್ಯ ಹೊಂದಿದೆ. ಅದಕ್ಕೆ ಸೂಕ್ತವಾದ ಯೋಜನೆಯನ್ನು ಸರ್ಕಾರ ಮಾಡಬೇಕು. ಅಣೆಕಟ್ಟೆ, ಕೆರೆ- ಕುಂಟೆಗಳಲ್ಲಿ ಸಂಗ್ರಹಿಸಿರುವ ಹೂಳು ತೆರವುಗೊಳಿಸಿ, ರೈತರಿಗೆ ಅನುಕೂಲವಾಗುವಂತೆ ಇದರ ಬಳಕೆಗೆ ಕ್ರಮವಹಿಸಬೇಕು. ಆಗ ನೀರಿನ ಸಂಗ್ರಹವೂ ಹೆಚ್ಚಲಿದೆ ಎಂದರು.

ತಮಿಳುನಾಡಿಗೆ ಹೋಲಿಸಿದರೆ ನಮ್ಮ ನೀರು ನಿರ್ವಹಣೆ ಯೋಜನೆ ಕಳಪೆಯಾಗಿದ್ದು, ಇದನ್ನು ಸುಧಾರಿಸುವ ಅಗತ್ಯವಿದೆ ರಾಜ್ಯದಲ್ಲಿ ನೀರಿನ ಲಭ್ಯತೆಯಿದ್ದರೂ, ಸಮಗ್ರವಾಗಿ ಬಳಸುವಂಥ ಉತ್ತಮ ವ್ಯವಸ್ಥೆಯಿಲ್ಲ. ಈ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶಪ್ರಸಾದ್‌ಮಾತನಾಡಿ, ನಾನು ಸದಾ ರೈತರೊಂದಿಗೆ ಇದ್ದು, ಅವರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯುವಂತಾಗಬೇಕು ಎಂದರು.

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಬೆಳಗಾವಿ ಅಧಿವೇಶದಲ್ಲಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಈಗಲೂ ಕ್ರಮಕ್ಕೆ ಮುಂದಾಗದಿದ್ದರೆ, ಮಲೆ ಮಹದೇಶ್ವರಬೆಟ್ಟದಲ್ಲಿ ನಡೆಯಲಿರುವ ಸರ್ಕಾರದ ಸಂಪುಟ ಸಭೆಗೆ ಸಾವಿರಾರು ರೈತರೊಂದಿಗೆ ಕಾಲ್ನಡಿಗೆಯಲ್ಲಿ ಬಂದು ಮುತ್ತಿಗೆ ಹಾಕಲಿದ್ದೇವೆ ಎಂದು ಅವರು ಎಚ್ಚರಿಸಿದರು.

ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನೀಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಅದರ ಬದಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದಾರೆ. ಅವುಗಳನ್ನು ಹಿಂಪಡೆಯಲು ಮಾಡುವ ಹೋರಾಟಗಳಿಗೂ ಸ್ಪಂದನೆ ಸಿಗುತ್ತಿಲ್ಲ. ಇಂಥ ನಡೆಯನ್ನು ರೈತ ಸಂಘ ಧಿಕ್ಕರಿಸುತ್ತದೆ ಎಂದರು.

ವಿಶ್ವ ರೈತ ದಿನಾಚರಣೆ ಸಮಿತಿ ಗೌರವಾಧ್ಯಕ್ಷ ಪ್ರೊ.ಎಸ್.ಶಿವರಾಜಪ್ಪ ಅವರ ಪ್ರಧಾನ ಸಂಪಾದಕತ್ವದ ಪ್ರೊ.ಎಂ. ಮಹದೇವಯ್ಯ, ಎನ್.ಎನ್. ನಾಯಕ್, ಸಿ.ವಿ. ಶಿವರುದ್ರಪ್ಪ ಸಂಪಾದಕತ್ವದ ‘ಆರಂಭ’ ಸಂಸ್ಮರಣಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಕೃಷಿ ಮತ್ತು ರೈತ ಬಾಧಿತ ಸಮಸ್ಯೆಗಳು- ಪರಿಹಾರಗಳು ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ರೈತರು ಮತ್ತು ಗ್ರಾಹಕರ ನಡುವೆ ಸಂಪರ್ಕ ಏರ್ಪಡಬೇಕು. ಆ ಮೂಲಕ ದಲ್ಲಾಳಿಗಳನ್ನು ದೂರವಿಡಬೇಕು. ರೈತರು ಎಂಎಸ್‌ಪಿ ಕೇಳುವ ಬದಲು ಎಂಆರ್‌ಪಿ ನಿಗದಿ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.

ರೈತ ಸಂಘ ಏಕೀಕರಣ ಸಮಿತಿ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್, ರೈತ ಸಂಘ ಸ್ಥಾಪಕ ಅಧ್ಯಕ್ಷ ವಿ.ಆರ್.ನಾರಾಯಣ ರೆಡ್ಡಿ, ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ, ಕೆಐಡಿಬಿ ರೈತಪರ ಹೋರಾಟಗಾರ ವಿಜಯ್ ಕುಮಾರ್, ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪಿ ಪೂಜಾರಿ, ದಾಬಸ್‌ಪೇಟೆಯ ರಾಜೇಸ್, ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಸಂಘಟನಾ ಕಾರ್ಯದರ್ಶಿ ಸೌಮ್ಯಾರಾಜ್, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಇತರರು ಇದ್ದರು.