ಜಿಲ್ಲೆ

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲಿ: ರಾಜ್ಯ ಕಬ್ಬು ಬೆಳೆಗಾರರ ಸಂಘ ಸರ್ಕಾರಕ್ಕೆ ಒತ್ತಾಯ

ಮೈಸೂರು: ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವ ಜತೆಗೆ ಸಾಲ ಮನ್ನಾ ಮಾಡಬೇಕು, ಸಾಲ ನೀತಿ ಬದಲಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದವು.
ನಗರದ ಗನ್‌ಹೌಸ್ ಬಳಿ ಇರುವ ಕುವೆಂಪು ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ಉದ್ಯಮಿಗಳಿಗೆ ನೀಡಿದ್ದ 12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ಪಕ್ಷಗಳು, ನಾಯಕರು, ರೈತ ಸಂಘಟನೆಗಳನ್ನು ಒಡೆದು ರೈತ ಕುಲವನ್ನೇ ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬರುತ್ತಿರುವ ಕಾರಣ ಎಲ್ಲ ರಾಜಕೀಯ ಪಕ್ಷಗಳು ಮತ ಬ್ಯಾಂಕ್‌ಗಾಗಿ ಪೈಪೋಟಿ ನಡೆಸಿ ರೈತರ ಪರ ಮಾತನಾಡುತ್ತಿವೆ. ಆದರೆ ಬರಗಾಲದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಯಾರೂ ಮಾತನಾಡುತ್ತಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ರೈತರ ಸಾಲ ಮನ್ನಾ ಮಾಡಿದ್ದರೂ ರಾಜ್ಯದಲ್ಲಿ ಆಗಿಲ್ಲ. ಕೇಂದ್ರ ಸರ್ಕಾರ ಉದ್ಯಮಿಗಳ 12 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಆದರೆ ರೈತರ ಸಾಲ ಯಾಕೆ ಮನ್ನಾ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕಬ್ಬು ಬೆಳೆಗಾರರ ಶೋಷಣೆ ನಿಲ್ಲಬೇಕಾದರೆ ಕಬ್ಬಿನ ಎಫ್‌ಆರ್‌ಪಿ ದರ ಬದಲಾಗಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು, ಸಾಗಣೆ ದರವನ್ನು ಮನಬಂದಂತೆ ಕಾನೂನು ಬಾಹಿರವಾಗಿ ಕಡಿತ ಮಾಡುತ್ತಿವೆ. ಹೀಗೆ ಕಡಿತ ಮಾಡಿದ ಹೆಚ್ಚುವರಿ ಹಣವನ್ನು ರೈತರಿಗೆ ವಾಪಸ್ ಕೊಡಿಸಬೇಕು. ರೈತರು 39 ದಿನ ಹೋರಾಟ ಮಾಡಿ, ಟನ್ ಕಬ್ಬಿಗೆ 150 ರೂ. ಹೆಚ್ಚುವರಿ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಸಕ್ಕರೆ ಕಾರ್ಖಾನೆಗಳು ಇನ್ನೂ ಹಣ ಪಾವತಿಸಿಲ್ಲ ಎಂದು ದೂರಿದರು.
ಹಣ ಕೊಡಿಸುವ ಅಥವಾ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವ ನೈತಿಕತೆ ಇಲ್ಲದಿದ್ದರೆ ಸರ್ಕಾರವೇ ರೈತರಿಗೆ ಪಾವತಿಸಬೇಕು. ರಾಜ್ಯದಲ್ಲಿ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೈತರು ಕೃಷಿ ತೊರೆದು ಗುಳೆ ಹೋಗುತ್ತಿದ್ದಾರೆ. ಗ್ರಾಮೀಣ ಬ್ಯಾಂಕ್ ಹೆಸರಿನ ಬ್ಯಾಂಕ್‌ಗಳು ಸಾಲ ಪಡೆದ ರೈತರಿಗೆ ದುಪ್ಪಟ್ಟು ಹಣ ಪಾವತಿಸುವಂತೆ ನೋಟಿಸ್ ನೀಡುವ ಮೂಲಕ ರೈತರ ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.
ಈ ಎಲ್ಲದರ ವಿರುದ್ಧ ರೈತರು ಜಾಗೃತರಾಗಿ ಸಂಘಟಿತ ಹೋರಾಟ ನಡೆಸಬೇಕು. ಕೃಷಿ ಸಾಲ ನೀತಿ ಬದಲಾಗಬೇಕು, ರೈತರು ಕೃಷಿ ಮಾಡಲು ಬ್ಯಾಂಕ್‌ಗಳು ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು, ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು, ಇಳುವರಿ ಮತ್ತು ತೂಕದಲ್ಲಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು, ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ರಾೃಕ್ಟರ್ ಬಿಡಿಭಾಗಗಳ ಜಿಎಸ್‌ಟಿ ತೆರಿಗೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ 8 ಲಕ್ಷಕ್ಕೂ ಹೆಚ್ಚು ಬಗರ್‌ಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು, ಅಧಿಕಾರಕ್ಕೆ ಬರುವ ಮೊದಲು ರೈತ ಸಂಘಟನೆಗಳಿಗೆ ಭರವಸೆ ನೀಡಿದ್ದಂತೆ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದಾಗಬೇಕು ಎಂದು ಒತ್ತಾಯಿಸಿದರು.
ಗ್ರೀನ್ ಬಡ್ಸ್ ಆಗ್ರೋ ಕಂಪನಿಗೆ ಠೇವಣಿ ಮಾಡಿ ವಂಚಿತರಾಗಿರುವ 2 ಲಕ್ಷ ಬಡವರು, ಕೂಲಿ ಕಾರ್ಮಿಕರಿಗೆ, ಕಂಪನಿಯಿಂದ ಮುಟ್ಟುಗೋಲು ಹಾಕಿರುವ ಆಸ್ತಿಯನ್ನು ಬೇಗ ಹರಾಜು ಪ್ರಕ್ರಿಯೆ ಮುಗಿಸಿ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ರೈತರ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.6ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಸಂಘದ ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ರೇವಣ್ಣ, ತಾಲೂಕು ಅಧ್ಯಕ್ಷರಾಗಿ ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಸುಂದರಪ್ಪ, ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ನೀಲಕಂಠಪ್ಪ ಅವರನ್ನು ನೇಮಕ ಮಾಡಲಾಯಿತು.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಕಿರಗಸೂರು ಶಂಕರ, ಸಿದ್ದೇಶ್, ವೆಂಕಟೇಶ, ವಿಜೇಂದ್ರ, ಕೆಂಡಗಣ್ಣಸ್ವಾಮಿ, ಪಟೇಲ್ ಶಿವಮೂರ್ತಿ, ಕಮಲಮ್ಮ ರೂಪಾ, ಕೂಡನಹಳ್ಳಿ ರಾಜಣ್ಣ, ಸುರೇಶ, ಮಂಜುನಾಥ ಇತರರು ಇದ್ದರು.