ಕೆ.ಎಂ.ದೊಡ್ಡಿ: ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ ಬೇಸಾಯ ಮಾಡಿದರೆ ರೈತರ ಬಾಳು ಬಂಗಾರವಾಗುವುದಲ್ಲದೆ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು ಎಂದು ಶಾಸಕ ಕದಲೂರು ಉದಯ್ ಕಿವಿಮಾತು ಹೇಳಿದರು.
ಸಮೀಪದ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠದ ಆವರಣದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಮಂಡ್ಯದ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ (ಆನರ್ಸ್) ಕೃಷಿ ಹಾಗೂ ಡಿಪ್ಲೊಮಾ (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ರೈತರು ಇಷ್ಟಪಟ್ಟು ಅಭಿಮಾನದಿಂದ, ಕೃಷಿ ತಜ್ಞರ ಸಲಹೆ ಸೂಚನೆ ಪಡೆದುಕೊಂಡು ಬೇಸಾಯ ಮಾಡಿದರೆ ಸಾಕು. ಭೂಮಿ ತಾಯಿ ರೈತರನ್ನು ಕೈಬಿಟ್ಟ ಉದಾಹರಣೆಯೇ ಇಲ್ಲ. ಆದ್ದರಿಂದ ರೈತರು ಕಡಿಮೆ ಖರ್ಚಿನ ಸಾವಯವ ಕೃಷಿ ಪದ್ಧತಿಯ ಬೇಸಾಯ ಕ್ರಮವನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದರು.
ವಿದ್ಯಾರ್ಥಿಗಳು ಮೂರು ತಿಂಗಳು ವಾಸ್ತವ್ಯ ಹೂಡಿ ಯಾವ ರೀತಿಯ ಕೃಷಿ ಪದ್ಧತಿ ಮೂಲಕ ಬೆಳೆ ಬೆಳೆಯಬಹುದು ಎಂಬುದರ ಬಗ್ಗೆ ಇಲ್ಲಿನ ಜನರಿಗೆ ತಿಳಿಸಿರುವುದು ಉತ್ತಮ ಬೆಳೆವಣಿಗೆ. ಐಷಾರಾಮಿ ಜೀವನ ಬಿಟ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಬಂದು ಕೃಷಿ ಬಗ್ಗೆ ಕಲಿತು ಜನರಿಗೆ ತಿಳಿಸುತ್ತಿರುವುದು ಶ್ಲಾಘನೀಯ ಎಂದರು.
ರೈತರು ಇಂದಿಗೂ ಹಳೇ ಪದ್ದತಿಯಲ್ಲಿ ವ್ಯಾವಸಾಯ ಮಾಡುತ್ತಿದ್ದು ಮಾಹಿತಿ ಕೊರತೆಯಿಂದ ರೈತರು ತಪ್ಪುಗಳನ್ನು ಮಾಡುತ್ತಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ರೈತರು ವೈಜ್ಞಾನಿಕ ಪದ್ಧತಿಗೆ ಮೊರೆಹೋಗಿ ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಿದ ಫಲಿತಾಂಶವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಶ್ರೀಕ್ಷೇತ್ರ ಕಪ್ಪಡಿ ಮತ್ತು ಹೊನ್ನಾಯಕನಹಳ್ಳಿ ಹಾಗೂ ಮಳವಳ್ಳಿ ಮಂಟೇಸ್ವಾಮಿ ಮಠಾಧಿಪತಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರು ಸಾನ್ನಿಧ್ಯ ವಹಿಸಿ ಮಾತನಾಡಿ, ಅನ್ನ ಕೊಡುವ ಭೂಮಿಯನ್ನು ನೈಸರ್ಗಿಕ ಬೇಸಾಯ ಮಾಡುವುದರ ಮೂಲಕ ಉಳಿಸಬೇಕು. ಹಲವು ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದರು.
ಕೃಷಿ ಭೂಮಿಗಳು ಕೃಷಿಯೇತರ ಭೂಮಿಗಳಾಗಿ ಪರಿವರ್ತನೆಗೊಳ್ಳುತಿದ್ದು ಭೂಮಿ ಫಲವತ್ತತೆ ಉಳಿಸಿಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಜನಸಂಖ್ಯೆ ಸ್ಫೋಟ ಎದುರಾದ ಸಂದರ್ಭದಲ್ಲಿ ಆಹಾರಕ್ಕಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿರುವುದರಿಂದ ಎಚ್ಚರಿಕೆ ವಹಿಸಿ ಭೂಮಿಯನ್ನು ಉಳಿಸಬೇಕು. ದೇಸಿ ತಳಿಗಳನ್ನು ಉಳಿಸಿ ಬೆಳೆಸಬೇಕು. ಕೃಷಿಯ ಜತೆಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಬೆಳೆಗೂ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
ಕೃಷಿ ವಸ್ತುಪ್ರದರ್ಶನದಲ್ಲಿ ಕೃಷಿ ಮಹಾವಿದ್ಯಾಲಯದ ಮಾಹಿತಿ ಕೇಂದ್ರ, ಸಮಗ್ರ ಕೃಷಿ ಪದ್ಧತಿಗಳು, ಭತ್ತ ಮತ್ತು ಮುಸುಕಿನ ಜೋಳ ಸುಧಾರಿತ ಬೇಸಾಯ, ಕಬ್ಬಿನ ಸುಧಾರಿತ ಬೇಸಾಯ, ಸಿರಿಧಾನ್ಯಗಳು, ದ್ವಿದಳ ಧಾನ್ಯ ಬೆಳೆಗಳು ಮತ್ತು ಮೇವು ಬೆಳೆಗಳ ಬೇಸಾಯ, ನೀರು ನಿರ್ವಹಣೆ, ಅರಣ್ಯ ಕೃಷಿ, ರೇಷ್ಮೆ ಕೃಷಿ, ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು ಮತ್ತು ಬಾಡಿಗೆ ಆಧಾರಿತ ಸೇವೆಗಳು, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಸ್ಯಾತ್ಮಕ ಮಣ್ಣುಗಳ ನಿರ್ವಹಣೆ, ಸಮಗ್ರ ರೋಗ ಮತ್ತು ಪೀಡೆಗಳ ನಿರ್ವಹಣೆ, ತೋಟಗಾರಿಕೆ ಬೆಳೆಗಳ ಬೇಸಾಯ, ಅಣಬೆ ಕೃಷಿ ಮತ್ತು ಜೈವಿಕ ಗೊಬ್ಬರಗಳ ತಾಂತ್ರಿಕತೆಗಳು, ಕೃಷಿ ಅರ್ಥಶಾಸ್ತ್ರ ಮತ್ತು ಕೃಷಿ ಮಾರುಕಟ್ಟೆಯ ಬಗ್ಗೆ ವಿದ್ಯಾರ್ಥಿಗಳು ರೈತರಿಗೆ ಮಾಹಿತಿ ನೀಡಿದರು.ಕಾರ್ಯಕ್ರಮ ಸಂಯೋಜಕ ಡಾ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿ ಕುಲಪತಿ ಡಾ.ಎಸ್.ವಿ ಸುರೇಶ, ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕರಾದ ಡಾ. ವೆಂಕಟೇಶ್, ಡಾ.ವಿ.ಎಲ್.ಮಧುಪ್ರಸಾದ್, ರಘುಪತಿ, ಡಾ.ಫಾತೀಮಾ, ಎನ್.ಡಿ ನರೇಶ್, ಮುಖಂಡರಾದ ಸಿದ್ದೇಗೌಡ, ನಿಂಗರಾಜು, ಪ್ರಕಾಶ್, ಮಹೇಂದ್ರ, ಯೋಗಾನಂದ್ ಇದ್ದರು.