ಬ್ಯಾಡಗಿ: ಬೆಳೆ ಹಾನಿ ಪರಿಹಾರ ವಿತರಣೆಗಾಗಿ ಅರ್ಜಿ ಸಲ್ಲಿಸಲು ತಾಲೂಕಿನ ರೈತರು ಆಗಮಿಸುತ್ತಿದ್ದು, ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ನಿತ್ಯ ನೂಕುನುಗ್ಗಲು ಉಂಟಾಗುತ್ತಿದೆ.
ತಾಲೂಕಿನ ಬ್ಯಾಡಗಿ, ಕಾಗಿನೆಲೆ ಹೋಬಳಿಯ 4 ಸಾವಿರಕ್ಕೂ ಅಧಿಕ ರೈತರು ನಾಲ್ಕೈದು ದಿನಗಳಿಂದ ನಿತ್ಯವೂ ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದು, ನೂಕುನುಗ್ಗಲು ತಡೆಗಟ್ಟಲು ಪೊಲೀಸರನ್ನು ನಿಯೋಜಿಸಲಾಗಿದೆ.
ಎಲ್ಲ ರೈತರು ಅರ್ಜಿ ಸಲ್ಲಿಸಿದ ನಕಲು ಪ್ರತಿ ಪಡೆಯಲು ಜೆರಾಕ್ಸ್ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ತಹಸೀಲ್ದಾರ್ ಕಚೇರಿ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳು ರೈತರಿಂದ ತುಂಬಿ ತುಳುಕುತ್ತಿವೆ.
ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿಗೆ ಕೆಲಸದ ತೀವ್ರತೆ ಹೆಚ್ಚಿದೆ. ಬೇರೆ ಬೇರೆ ವಿಭಾಗಗಳ ಸಿಬ್ಬಂದಿ ರೈತರ ಅರ್ಜಿ ಸ್ವೀಕರಿಸುತ್ತಿದ್ದಾರೆ. ನಾಲ್ಕೈದು ದಿನಗಳಿಂದ ತಮ್ಮ ಕೆಲಸದ ಜತೆಗೆ ಹೆಚ್ಚುವರಿಯಾಗಿ ಅರ್ಜಿ ಪಡೆಯುವುದು, ನಕಲು ಪ್ರತಿಗಳಿಗೆ ಸಹಿಮಾಡುವುದು, ಪ್ರತಿದಿನದ ಅರ್ಜಿಗಳನ್ನು ಸಂಗ್ರಹಿಸಿ ಬಂಡಲ್ ಸಿದ್ದಪಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕಳುಹಿಸುವಲ್ಲಿ ನಿರತರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲೂಕಿನ 65 ಗ್ರಾಮಗಳ ರೈತರು ಬೆಳೆಹಾನಿ ಪರಿಹಾರ ವಿತರಣೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಬಾರಿ ಅರ್ಜಿಗಳು ಎಲ್ಲ ಮಾಹಿತಿ ಒಳಗೊಂಡಿದ್ದು, ಅಧಿಕಾರಿಗಳಿಗೆ ಒಂದೇ ಪುಟದ ಅರ್ಜಿಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗಲಿವೆ. ರೈತ ಸಂಘದ ಲೆಟರ್ ಪ್ಯಾಡ್‌ನಲ್ಲಿ ಅರ್ಜಿ ವಿತರಣೆ ಮಾಡಿದ್ದು, ಈವರೆಗೂ 10,500 ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದರು.