ಜಿಲ್ಲೆ

ಕೃಷಿಕರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿ:ಡಿಸಿ

ಆದರ್ಶ್. ಎಂ.ಕೆ.

ಮಡಿಕೇರಿ: ಕೃಷಿಕರು ಸರ್ಕಾರದ ಸೌಲಭ್ಯವನ್ನು ಪಡೆಯಲು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೋರಿದರು.


ನಗರದ ಜಿಲ್ಲಾಧಿಕಾರಿರವರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಆಧಾರ್ ಕಾರ್ಡ್ ಜತೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಆ ನಿಟ್ಟಿನಲ್ಲಿ ರೈತರು ಈ ಬಗ್ಗೆ ವಿಶೇಷ ಗಮನಹರಿಸಬೇಕು. ಜಿಲ್ಲೆಯಲ್ಲಿ ೩,೨೬,೭೭೬ ಕೃಷಿಕರಲ್ಲಿ ೧,೪೭,೬೨೧ ಕೃಷಿಕರು ಫ್ರೂಟ್ಸ್ ತಂತ್ರಂಶದಲ್ಲಿ ಹೆಸರು ನೋಂದಾಯಿಸಿದ್ದಾರೆ. ಉಳಿದಂತೆ ೧,೨೯,೯೭೬ ಕೃಷಿಕರು ಫ್ರೂಟ್ಸ್ ತಂತ್ರಾಂಶದಡಿ ಹೆಸರು ನೋಂದಾಯಿಸಬೇಕಿದೆ ಎಂದರು.


ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಬಯಸುವ ಎಲ್ಲಾ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಾಯಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.


ರೈತರು ಜಮೀನಿಗೆ ಸಂಬಂಧಿಸಿದ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಗುರುತಿನ ಸಂಖ್ಯೆ (ಎಫ್‌ಐಡಿ) ಪಡೆಯಬಹುದು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಇಲಾಖೆ ಮತ್ತು ಇತರೆ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸಹಾಯಧನ ಸೌಲಭ್ಯ ಪಡೆಯಲು ಮತ್ತು ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಹಾನಿ ಪರಿಹಾರ, ಬ್ಯಾಂಕ್ ಸಾಲ ಪಡೆಯಲು ಹಾಗೂ ಇತರೆ ಯೋಜನೆಗಳಿಗೆ ಫ್ರೂಟ್ಸ್ ತಂತ್ರಾಂಶದಲ್ಲಿರುವ ವಿವರಗಳನ್ನು ಬಳಸಲಾಗುವುದು ಎಂದರು.


ಎಫ್‌ಐಡಿಯನ್ನು ಮಾಡಿಸಲು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ ಪಹಣಿ ಪ್ರತಿಗಳು, ರೈತರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಪ್ರತಿ(ಪರಿಶಿಷ್ಟ ವರ್ಗದ ರೈತರಿಗೆ ಕಡ್ಡಾಯ) ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರ, ದಾಖಲಾತಿಗಳು ಅವಶ್ಯವಾಗಿದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ, ಸಹಾಯಕ ನಿರ್ದೇಶಕ ಗೌರಿ ಇದ್ದರು.