ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು. 
ಜಿಲ್ಲೆ

ಮುಂಗಾರು ಬಿತ್ತನೆಗೆ ಸಜ್ಜಾದ ಅನ್ನದಾತರು

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ತಾಲೂಕಿನ ಕೃಷಿ ಇಲಾಖೆಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯ ಮುಧೋಳ ಮತ್ತು ಲೋಕಾಪುರದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಾರಂಭವಾಗಿದ್ದು, ರೈತರು ಆಧಾರ್ ಕಾರ್ಡ್ ಪ್ರತಿ ತೆಗೆದುಕೊಂಡು ಹೋಗಿ ಸರ್ಕಾರಿ ಸೌಲಭ್ಯ ಪಡೆಯಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಬಿ. ದೊಡಮನಿ ತಿಳಿಸಿದ್ದಾರೆ.

ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ರೈತರು ಇಳಿಜಾರು ಜಮೀನುಗಳಲ್ಲಿ ಕೋರಿಗೆ ಬಿತ್ತನೆ ಕೈಗೊಳ್ಳಬಹುದು, ಸಮತಟ್ಟಾದ ಮತ್ತು ತಂಪು ಹಿಡಿಯುವ ಜಮೀನುಗಳಲ್ಲಿ ಸಾಲುಗಳನ್ನು ಕೊರೆದು ಬೋದಿನ ಮೇಲೆ ಕಾಳುಗಳನ್ನು ಊರುವುದು ಉತ್ತಮ. ಇದರಿಂದ ಹೆಚ್ಚಾದ ನೀರು ಬಸಿದು ಹೋಗಿ ಬೆಳೆಗಳಿಗೆ ತೊಂದರೆಯಾಗುವುದಿಲ್ಲ. ಕೇವಲ ಒಂದೆ ಬೆಳೆಯನ್ನು ಬೆಳೆಯದೆ ಬಹು ಬೆಳೆ ಪದ್ಧತಿ, ಅಂತರ ಬೆಳೆ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ದ್ವಿದಳ ಧಾನ್ಯಗಳಿಗೆ ಮತ್ತು ಸೋಯಾಬಿನ ಬೀಜಕ್ಕೆ ರೈಜೋಬಿಯಂ ಮತ್ತು ಟೈಕೋಡರ್ಮಾ ಜೈವಿಕ ಗೊಬ್ಬರದಿಂದ ಬಿಜೋಪಚಾರ ಮಾಡಿ ಬಿತ್ತನೆ ಮಾಡುವುದು, ಸಮತೋಲನ ಪೋಷಕಾಂಶ ಬಳಸಿ ಹೆಚ್ಚಿನ ಲಾಭ ಮತ್ತು ಭೂಮಿಯ ಲವತ್ತತೆ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ತೊಗರಿ, ಅಲಸಂದಿ ಬೆಳೆಗಳಿಗೆ ಹಾಗೂ ಎಣ್ಣೆ ಕಾಳು ಬೆಳೆಗಳಾದ ಸೋಯಾ ಅವರೆ, ಸೂರ್ಯಕಾಂತಿ ಬೆಳೆಗಳಿಗೆ ಸಾರಜನಕ, ರಂಜಕ ಹಾಗೂ ಗಂಧಕ ಪೂರೈಸುವ ರಸಗೊಬ್ಬರವನ್ನು ತಳಗೊಬ್ಬರವನ್ನಾಗಿ, ಬಿತ್ತುವ ಸಮಯದಲ್ಲಿ ಬಳಸುವುದು ಮುಖ್ಯ ಎಂದಿದ್ದಾರೆ.

ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳ ಬಿತ್ತನೆಗೆ ಸಾರಜನಕ, ರಂಜಕ, ಪೋಟ್ಯಾಷ್ ಒದಗಿಸುವ ಸಂಯುಕ್ತ ರಸಗೊಬ್ಬರದೊಂದಿಗೆ ಕಪ್ಪು ಮಣ್ಣಿನಲ್ಲಿ ಸತುವಿನ ಸಲ್ಫೇಟ್, ಕೆಂಪು ಮಣ್ಣಿನಲ್ಲಿ ಇದರೊಂದಿಗೆ ಕಬ್ಬಿಣ ಸಲ್ಫೇಟ್ ಲಘುಪೋಷಕಾಂಶ ಗೊಬ್ಬರವನ್ನು ಬಳಸುವುದು ಉತ್ತಮ. ಡಿಎಪಿ ಗೊಬ್ಬರ ಮಾತ್ರ ಬಳಸದೆ ಅದಕ್ಕೆ ಪರ್ಯಾಯವಾಗಿ ಲಭ್ಯವಿರುವ ಗಂಧಕ ಒದಗಿಸುವ ಪೋಟ್ಯಾಶ ಅಥವಾ ಪೋಟ್ಯಾಶ ಒದಗಿಸುವ ಇತರ ಸಂಯುಕ್ತ ಗೊಬ್ಬರ, ಕಾಂಪ್ಲೆಕ್ಸ್ ರಸಗೊಬ್ಬರ ಸಹ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮೇಲು ಗೊಬ್ಬರ ನೀಡುವಾಗ ಅಥವಾ ತಂಪು ವಾತಾವರಣವಿದ್ದಾಗ ಬೆಳೆಗಳ ಚೇತರಿಕೆಗಾಗಿ ಕಡಿಮೆ ದರದಲ್ಲಿ ಸಿಗುವ ನ್ಯಾನೋ ಯುರಿಯಾ ಮ್ಯಾಂಗನೀಸ್ ಸಲ್ಫೇಟ್ ದ್ರವರೂಪದ ಸಿಂಪರಣೆಯನ್ನು ಕೈಗೊಳ್ಳಲು ತಿಳಿಸಿದೆ. ಎಲ್ಲ ಕೃಷಿ ಪರಿಕರಗಳನ್ನು ಅಧೀಕೃತ ಮಾರಾಟಗಾರರಿಂದ ಮಾತ್ರ ಖರೀದಿಸಲು ದೊಡಮನಿ ತಿಳಿಸಿದ್ದಾರೆ.