ಜಿಲ್ಲೆ

ಬಮುಲ್ ವಿರುದ್ಧ ಸಿಡಿದೆದ್ದ ರೈತರು ಬೈರಾಪಟ್ಟಣ ಶಿಬಿರ ಕಚೇರಿ ಎದುರು ಪ್ರತಿಭಟನೆ

 ಚನ್ನಪಟ್ಟಣ

ಹಾಲು ಖರೀದಿ ದರ ಕಡಿತ ಸೇರಿದಂತೆ ಬಮುಲ್ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬೈರಾಪಟ್ಟಣದಲ್ಲಿರುವ ಶಿಬಿರ ಕಚೇರಿ ಬಳಿ ಪ್ರತಿರೋಧ ಚಳವಳಿ ನಡೆಸಿದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಮತ್ತು ಹಾಲು ಉತ್ಪಾದಕರು, ಹಾಲು ಖರೀದಿ ದರ ಹೆಚ್ಚಳ ಸೇರಿದಂತೆ ಹಲವು ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಪಡಿಸಿದರು.

ಪ್ರತಿರೋಧ ಚಳವಳಿ ವೇಳೆ ಮಾತನಾಡಿದ ರೈತ ಮುಖಂಡ ಸಿ. ಪುಟ್ಟಸ್ವಾಮಿ, ಹಾಲು ಉತ್ಪಾದನೆಯಲ್ಲಿ ಬಮುಲ್ ಮೊದಲ ಸ್ಥಾನದಲ್ಲಿದೆ. ಆದರೆ ಒಕ್ಕೂಟ ಇದುವರೆಗೂ ಹಾಲು ಖರೀದಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸದಿರುವುದು ರೈತಕುಲಕ್ಕೆ ಮಾಡಿರುವ ಬಹುದೊಡ್ಡ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತಸಮುದಾಯ ಹಲವಾರು ಸವಾಲುಗಳ ನಡುವೆ ಹೈನುಗಾರಿಕೆ ಮಾಡುತ್ತಿದೆ. ಈ ಮಧ್ಯೆ ಹೈನೋದ್ಯಮಕ್ಕೆ ಧಕ್ಕೆ ತರುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಬೇಸರದ ಸಂಗತಿ. ಹಾಲು ಉತ್ಪಾದಕರ ಹಿತ ಕಾಪಾಡಬೇಕಾದ ಬೆಂಗಳೂರು ಹಾಲು ಒಕ್ಕೂಟವೇ ಉತ್ಪಾದಕರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಬರದ ಈ ಪರಿಸ್ಥಿತಿಯಲ್ಲಿ ಹಾಲು ಖರೀದಿ ದರವನ್ನು 2 ರೂ ಕಡಿತ ಮಾಡಿರುವುದು ಸರಿಯಲ್ಲ ಎಂದರು.

ಹಾಲು ಉತ್ಪಾದನೆ ವೆಚ್ಚ ಅಧಿಕವಾಗಿದೆ. ಮೇವಿನ ಅಭಾವ, ಪಶು ಆಹಾರದ ಬೆಲೆ ಹೆಚ್ಚಳದಿಂದ ಹೈನುಗಾರಿಕೆ ಸಮಸ್ಯೆಗೆ ಸಿಲುಕಿದೆ. ಒಕ್ಕೂಟದ ಆರ್ಥಿಕ ನಷ್ಟ ಸರಿದೂಗಿಸುವ ಉದ್ದೇಶದಿಂದ ಹಾಲಿನ ದರ ಕಡಿತ ಮಾಡಿರುವುದು ಯಾವ ನ್ಯಾಯ? ಒಕ್ಕೂಟದ ಆಡಳಿತಾತ್ಮಕ ವೆಚ್ಚ ಮೀತಿ ಮೀರಿದೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವೇಚ್ಚಾಚಾರದಿಂದ ಹಣ ವ್ಯಯ ಮಾಡುತ್ತಿದ್ದಾರೆ. ಅನಗತ್ಯ ವೆಚ್ಚ ಕಡಿತ ಮಾಡುವ ಬದಲಿಗೆ ರೈತರ ಬೆವರಿನ ಶ್ರಮಕ್ಕೆ ಕೈ ಹಾಕುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಕೆಎಂಎ್, ಬಮುಲ್ನಿಂದ ನಿರಂತರವಾಗಿ ಹೈನುಗಾರಿಕೆಗೆ ಪೆಟ್ಟು ನೀಡುವ ಕೆಲಸವಾಗುತ್ತಿದೆ. ಸರ್ಕಾರ ಹಾಗೂ ಈ ಸಂಸ್ಥೆಗಳ ನಡೆ ಗಮನಿಸಿದರೆ, ಬಹುಶಃ ಒಕ್ಕೂಟಗಳನ್ನು ಖಾಸಗೀಕರಣ ಮಾಡುವ ಸಂಚು ನಡೆಯುತ್ತಿರಬಹುದು ಎನಿಸುತ್ತದೆ. ಇದೇನಾದರೂ ನಡೆದರೆ, ರೈತರು ಕೈಯಲ್ಲಿ ಆಯುಧ ಹಿಡಿದು ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.

ಸಿಬ್ಬಂದಿ ಸಂಬಳ ಕಡಿತ ಮಾಡಿ

ಶಿಬಿರ ಕಚೇರಿ ಗೇಟ್ ಬಳಿ ಕೆಲಕಾಲ ಚಳುವಳಿ ನಡೆಸಿದ ರೈತರು, ಬಮುಲ್ನ ಕೇಂದ್ರ ಕಚೇರಿ ವ್ಯವಸ್ಥಾಪಕ ಡಾ. ಶ್ರೀಧರ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಚರ್ಚೆ ನಡೆಸಿ ಅಹವಾಲು ಸಲ್ಲಿಸಿದರು.

ಒಕ್ಕೂಟದ ಆರ್ಥಿಕ ವೆಚ್ಚ ಸರಿದೂಗಿಸಲು ಹಾಲಿನ ದರ ಕಡಿತ ಮಾಡಿರುವುದು ಯಾವ ನ್ಯಾಯ? ಒಂದುವೇಳೆ ಆರ್ಥಿಕ ಪರಿಸ್ಥಿತಿ ಸರಿಪಡಿಸಬೇಕಾದರೆ, ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಬಳ ಕಡಿತ ಮಾಡಬಹುದಲ್ಲವೇ? ಕೊಟ್ಟಿಗೆಯಲ್ಲಿ ಸೊಳ್ಳೆ ಕಚ್ಚಿಸಿಕೊಂಡು, ನಾವು ಸಹ ಒಂದು ಲೋಟ ಹಾಲು ಕುಡಿಯದೇ ನಿಮಗೆ ಹಾಲು ನೀಡುತ್ತೇವೆ. ಆದರೆ, ನಿಮ್ಮ ಲೋಪಗಳಿಗೆ ನಮ್ಮ ಹೊಟ್ಟೆ ಮೇಲೆ ಹೊಡೆಯುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಒಕ್ಕೂಟ ಹಾಲು ಉತ್ಪಾದಕರಿಗೆ ಮಹಾನ್ ದ್ರೋಹ ಎಸಗುತ್ತಿದೆ. ಇದರಿಂದ ರೈತ ಸಾಲಗಾರನಾಗುತ್ತಿದ್ದಾನೆ. ಇವುಗಳ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು. ಬಮುಲ್ ಆಡಳಿತ ಮಂಡಳಿ ಹಾಗೂ ಹಿರಿಯ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಬೇಕು ಎಂದು ಆಗ್ರಹಿಸಿದರು.

ಶೀಘ್ರ ಸಭೆ ಭರವಸೆ

ಹಾಲು ಉತ್ಪಾದಕರ ಬೇಡಿಕೆಗಳ ಬಗ್ಗೆ ಚರ್ಚಿಸಲು ಶೀಘ್ರ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಡಾ. ಶ್ರೀಧರ್ ಭರವಸೆ ನೀಡಿದರು. ಪ್ರತಿಭಟನಾಕಾರರ ಸಮಸ್ಯೆಗಳನ್ನು ಸಮಾಧಾನಚಿತ್ತದಿಂದ ಆಲಿಸಿದ ಅವರು ನಿಮ್ಮ ಅಹವಾಲುಗಳನ್ನು ಒಕ್ಕೂಟದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಬಮುಲ್ ಶಿಬಿರ ಉಪ ವ್ಯವಸ್ಥಾಪಕ ಡಾ.ಹೇಮಂತ್, ಗ್ರಾಮಾಂತರ ಪಿಎಸ್‌ಐ ಲಿಯಾಕತ್ ಬಮುಲ್ ವಿಸ್ತರಣಾಧಿಕಾರಿಗಳಾದ ಹೊನ್ನಪ್ಪ ಪೂಜಾರಿ ಇದ್ದರು. ರೈತಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಗೌಡ, ಮಂಜುನಾಥ್, ಸಿದ್ದಪ್ಪ, ನರಸಿಂಹಣ್ಣ, ದೇವರಾಜು, ಶಶಿಕುಮಾರ್, ಮಲ್ಲಿಕಾರ್ಜುನ್, ಶೋಭಾ ಸೇರಿದಂತೆ ಇತರರು ಇದ್ದರು.

ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೆಎಂಎ್ನಲ್ಲಿ ನೇಮಕ ಮಾಡಿಕೊಂಡು, ಒಕ್ಕೂಟಗಳಿವೆ ವರ್ಗಾವಣ ಮಾಡುವ ಅವಿವೇಕದ ನಿರ್ಧಾರ ನಿಲ್ಲಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಮತ್ತು ಅಧಿಕಾರಿಗಳ ನೇಮಕ ಮಾಡಿಕೊಳ್ಳಬಾರದು.ಸಿ. ಪುಟ್ಟಸ್ವಾಮಿ ರೈತ ಮುಖಂಡಬೇಡಿಕೆಗಳು * ಆಡಳಿತಾತ್ಮಕ ವೆಚ್ಚಕ್ಕೆ ಕಡಿವಾಣ * ಬಮುಲ್ ಕಲ್ಯಾಣಟ್ರಸ್ಟ್ ಮಾರ್ಗಸೂಚಿಗಳಲ್ಲಿ ಪಾರದರ್ಶಕತೆ* 59ನೇ ಆಡಳಿತ ಮಂಡಳಿ ಸಭೆಯ ತೀರ್ಮಾನ ವಾಪಸ್ * ಹಾಲು ಖರೀದಿ ದರ ಕನಿಷ್ಠ 40 ರೂ. ನಿಗದಿ* ಹಾಲಿನ ಮೇಲೆ ವಿಧಿಸುತ್ತಿರುವ ಲೇವಿಯನ್ನು ತಕ್ಷಣ ರದ್ದು* ಜಿಲ್ಲಾವಾರು ಪಶು ಆಹಾರ ಉತ್ಪಾದನಾ ಘಟಕ ಆರಂಣ* ನೇಮಕಾತಿಯಲ್ಲಿ ಹಾಲು ಉತ್ಪಾದಕ ರೈತ ಮಕ್ಕಳಿಗೆ ಶೇ. 90 ಮೀಸಲಾತಿ