ತುಮಕೂರು: ರೈತರಿಗೆ ಸಮರ್ಪಕ ರಸಗೊಬ್ಬರ ವಿತರಿಸುವುದು, ಕಾಳಸಂತೆಕೋರರಿಗೆ ಕಡಿವಾಣ ಹಾಕುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳ ಜತೆ ಕೃಷಿ ಅಧಿಕಾರಿಗಳು ಸೇರಿಕೊಂಡು ಕೃತಕ ಆಭಾವ ಸೃಷ್ಟಿಸಿ ಯೂರಿಯಾ ಸಿಗದಂತೆ ಮಾಡಿದ್ದಾರೆ. ಕಾಳಸಂತೆಕೋರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು. ರಾಗಿ ಬೆಳೆಗೆ ಯೂರಿಯಾ ಅಗತ್ಯವಿದ್ದು, ಕೊರತೆ ಇದೆ ಎಂದು ಹೇಳಲಾಗುತ್ತಿದೆ. ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ನೀಡಬೇಕಾದ ಗೊಬ್ಬರವನ್ನು ಖಾಸಗಿ ಅಂಗಡಿಗಳಿಗೆ ನೀಡಿ ಕೃತಕ ಅಭಾವ ಸೃಷ್ಟಿಸಲಾಗಿದೆ. ಅಧಿಕಾರಿಗಳು ಮತ್ತು ರಸಗೊಬ್ಬರ ಅಂಗಡಿಗಳ ಮಾಲೀಕರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಪಟೇಲ್ ಆರೋಪಿಸಿದರು.
ಮೂರ‌್ನಾಲ್ಕು ದಿನ ಕಳೆದರೆ ರೈತರಿಗೆ ಗೊಬ್ಬರದ ಅಗತ್ಯವೇ ಬರುವುದಿಲ್ಲ. ದುಪ್ಪಟ್ಟು ಬೆಲೆ ಪಡೆಯುತ್ತಿರುವ ಅಂಗಡಿಗಳ ಮಾಲೀಕರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
30 ಸಾವಿರ ಮೆಟ್ರಿಕ್ ಟನ್ ಬೇಡಿಕೆ: ಈ ಸಾಲಿನಲ್ಲಿ ಸಮೃದ್ಧ ಮಳೆಯಾಗಿರುವ ಕಾರಣ 30 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಈವರೆಗೆ 25,344 ಮೆಟ್ರಿಕ್ ಟನ್ ಸರಬರಾಜಾಗಿದೆ. ಇನ್ನೂ 5000 ಮೆಟ್ರಿಕ್ ಟನ್ ಅಗತ್ಯವಿದೆ. ಇಲಾಖೆಯಿಂದ ಎಲ್ಲ ರಸಗೊಬ್ಬರ ಕಾರ್ಖಾನೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ರವಾನೆಯಾಗುವ ನಿರೀಕ್ಷೆ ಇದೆ. ಅಂಗಡಿಗಳಲ್ಲಿ ಹೆಚ್ಚಿನ ದರ ವಿಧಿಸುವ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನ ಭರವಸೆಯಿತ್ತರು.