ಜಿಲ್ಲೆ

ಹಸು ಕಳೇಬರ ಇಟ್ಟು ರೈತರ ಪ್ರತಿಭಟನೆ

Mysuru - Desk - Naveen Kumar H P

ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದಲ್ಲಿ ಹುಲಿ ದಾಳಿಯಿಂದ ಸಾವಿಗೀಡಾದ ಹಸುವಿನ ಕಳೇಬರವನ್ನು ಇಟ್ಟುಕೊಂಡು ತಾಲೂಕು ಕಚೇರಿ ಎದುರು ರೈತ ಮುಖಂಡರು ಸಾಮೂಹಿಕ ರೈತ ಸಂಘದ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.

ಸೋಮವಾರ ಗ್ರಾಮದ ನಾಗೇಶ್ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದುಹಾಕಿದೆ. ಕಳೆದ ನಾಲ್ಕಾರು ತಿಂಗಳಿನಲ್ಲಿ ಹುಲಿ ಹತ್ತಕ್ಕೂ ಹೆಚ್ಚು ರಾಸುಗಳು ಇಪ್ಪತ್ತು ಮೇಕೆಗಳನ್ನು ಕೊಂದಿದ್ದರೂ ಅರಣ್ಯ ಇಲಾಖೆ ಇನ್ನೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದರು.

ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ , ಬಫರ್ ವಲಯದ ಆರ್‌ಎಫ್‌ಒ ಸತೀಶ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ವನರಾಜು, ಸಬ್ ಇನ್ಸ್ ಪೆಕ್ಟರ್ ಗಳಾದ ಸಾಹೇಬಗೌಡ, ಆರ್.ಚಂದ್ರಪ್ಪ ರೈತರೊಂದಿಗೆ ಮಾತನಾಡಿ, ಮುಂದಿನ ಹದಿನೈದು ದಿನಗಳಲ್ಲಿ ಎಲ್ಲ ಜಾನುವಾರು ಮಾಲೀಕರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.