17 ಟಿರಿಜ ಟಿತಿ 01 ನಂಜನಗೂಡು ಆಡಳಿತ ಭವನದ ಮುಂಭಾಗ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ನಂಜನಗೂಡಿನಲ್ಲಿ ರೈತರ ಪ್ರತಿಭಟನೆ

ಮಾದೇಶ್ ತಿ.ನರಸೀಪುರ

ನಂಜನಗೂಡು: ಚಿತ್ರನಗರಿಯ ಭೂ ಪರಿಹಾರದ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಂಜನಗೂಡಿನಲ್ಲಿ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ರೈತರು, ದಸಂಸ ಸದಸ್ಯರು, ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಚಿಕ್ಕಯ್ಯನಛತ್ರ ಹೋಬಳಿಗೆ ಸೇರಿದ ತಾಂಡವಪುರ, ಅಡಕನಹಳ್ಳಿ, ಇಮ್ಮಾವು, ಇಮ್ಮವುಹುಂಡಿ ಗ್ರಾಮಗಳ ರೈತರು ಇಮ್ಮಾವು ಸರ್ವೇ ನಂಬರ್ 390ರಿಂದ 430ರ ವರೆಗಿನ ನೂರಾರು ರೈತರ ಕೃಷಿ ಭೂಮಿಯನ್ನು ಚಿತ್ರನಗರಿ ನಿರ್ಮಾಣ ಮಾಡಲು ಕೆಐಎಡಿಬಿ ಮೂಲಕ ಮೂಲಕ ಮಾಲೀಕರನ್ನು ಗುರುತಿಸಿ ಪ್ರತಿ ಎಕರೆಗೆ ನಾಲ್ಕು ಲಕ್ಷ ರೂ.ಗಳನ್ನು ನೀಡಬೇಕು ಎಂದು ನಿಗದಿಪಡಿಸಲಾಗಿತ್ತು ಎಂದು ಹೇಳಿದರು.

ರಾಜಕಾರಣಿಗಳ ಆಪ್ತ ಮತ್ತು ಇತರ ಮುಖಂಡರ ಜತೆಗೂಡಿ ನಂಜನಗೂಡಿನ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪರಿಹಾರದ ಹಣಕ್ಕೆ ಮನಬಂದವರ ಹೆಸರನ್ನು ನಮೂದು ಮಾಡಿ ನಂಜನಗೂಡಿನ ಇಮ್ಮಾವು ಸೇರಿದಂತೆ ಗುಂಡ್ಲುಪೇಟೆ, ತಿ.ನರಸೀಪುರ, ಎಚ್.ಡಿ.ಕೋಟೆ, ಮೈಸೂರು ತಾಲೂಕಿನ ಅಪರಿಚಿತ ರೈತರಿಗೂ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ನೀಡಿ ಕಂದಾಯ ಇಲಾಖೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ನೀಡಿದ ಪರಿಹಾರದ ಹಣವನ್ನು ಮೂಲ ರೈತರನ್ನು ಗುರುತಿಸಿ ನೀಡಬೇಕಾಗಿತ್ತು. ಆದರೆ, ರಾಜಕೀಯ ಮುಖಂಡರು ನೀಡಿದ ಫಲಾನುಭವಿಗಳ ಪಟ್ಟಿಯನ್ನು ಆಧರಿಸಿ ಸರ್ಕಾರದ 18 ಕೋಟಿ ರೂ. ಲೂಟಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.

ಜು.18ರವರೆಗೆ ಗಡುವು ನೀಡಿದ್ದು, ಈ ಪ್ರಕರಣದಲ್ಲಿ ತಹಸೀಲ್ದಾರ್ ಅವರನ್ನು ಅಮಾನತು ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಶೇಷ ತಹಶೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ದಸಂಸ ಜಿಲ್ಲಾ ಮುಖಂಡರಾದ ಕಾರ್ಯ ಬಸವಣ್ಣ, ಹೆಜ್ಜೆಗೆ ಪ್ರಕಾಶ್, ಆಲಗೂಡು ಶಿವಕುಮಾರ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಕೆಂಪೂಗೌಡರು, ಮರಂಕಯ್ಯ, ಗಟ್ಟವಾಡಿ ಮಹೇಶ್ ಇತರರು ಇದ್ದರು.