ಜಿಲ್ಲೆ

ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಮೈಸೂರಿನಲ್ಲಿ ರೈತರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳ ವಾರ ಪ್ರತಿಭಟನೆ ನಡೆಯಿತು.

ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದು, ಕೆಲವು ಸ್ಥಳೀಯ ಬಲಾಢ್ಯರು ಕೆರೆ ಒತ್ತುವರಿ ಮಾಡಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರಿನ ಮೂಲ ನಿಂತು ಹೋಗಿದೆ. ಆದ್ದರಿಂದ ಅಂತರ್ಜಲ ಕುಸಿತವಾಗುತ್ತಿದೆ. ಸುಮಾರು 80 ವರ್ಷಗಳಿಂದ ಕೆರೆಗಳಲ್ಲಿ ಹೂಳು ತುಂಬಿ ಅಂತರ್ಜಲ ಕುಸಿತವಾಗಿದೆ. ಹಾಗಾಗಿ ಹೂಳು ತುಂಬಿದ ಕೆರೆಗಳ ಮಣ್ಣನ್ನು ಬೇಸಿಗೆಯಲ್ಲಿ ರೈತರ ಜಮೀನಿಗೆ ಉಚಿತವಾಗಿ ಸರಬರಾಜು ಮಾಡಿದ್ದಲ್ಲಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಏತ ನೀರಾವರಿ ಬದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ್ದಲ್ಲಿ ನೈಸರ್ಗಿಕವಾದ ಮಳೆ ನೀರನ್ನು ಕ್ರೋಡೀಕರಿಸಿ ಪ್ರತಿ ಜಿಲ್ಲೆಗೆ 40 ಟಿ.ಎಂ.ಸಿ ಮಳೆಯ ನೀರನ್ನು ಸಂಗ್ರಹಿಸಿದಂತಾಗುತ್ತದೆ. ಒಟ್ಟು ರಾಜ್ಯದಲ್ಲಿ 1,250 ಟಿ.ಎಂ.ಸಿ ನೀರನ್ನು ಮಳೆಯಿಂದಾಗಿ ಸಂಗ್ರಹಿಸ ಬಹುದಾಗಿದೆ. ರಾಜ್ಯದ 40 ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅರಣ್ಯದ ಒಳಗೆ ಹಾಗೂ ಅಂಚಿನಲ್ಲಿ ಇರುವ ಕೆರೆಗಳ ಪುನರುಜ್ಜಿವನದಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯಲ್ಲಿ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ ಎಂದರು.

ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್‌ಗೆ 3295 ರೂ.ನೀಡುತ್ತಿದ್ದು, ಕಬ್ಬು ಉತ್ಪಾದನೆ ವೆಚ್ಚಕ್ಕೆ ಸರಿಯಾಗಿಲ್ಲ. ಜಿಲ್ಲಾಧಿಕಾರಿ ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆಯನ್ನು ಎಸ.ಎ.ಪಿ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆಯಿಂದ ಬಾಳೆ ಬೆಳೆಗಾರರಿಗೆ ಬರುತ್ತಿದ್ದ ಅನುದಾನ ಕಳೆದ ಒಂದು ವರ್ಷದಿಂದ ಬರುತ್ತಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಿಂದ ಮೂರನೇ ದರ್ಜೆಯ ಬಾಳೆಕಾಯಿ ಮೈಸೂರು ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ಸ್ಥಳೀಯ ರೈತರಿಗೆ ನಷ್ಟವಾಗುತ್ತಿದೆ. ಬಾಳೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಮತ್ತು ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂಬರುವ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಕಳೆದ ವರ್ಷದಂತೆ ವಿಳಂಬ ನೀತಿ ಅನುಸರಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ಬಳಿಕ ಅಪರ ಜಿಲ್ಲಾಧಿಕಾರಿ ಶಿವರಾಜ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಅತ್ತಹಳ್ಳಿ ದೇವರಾಜ್, ಸೋಮಶೇಖರ್, ಬರಡನಪುರ ನಾಗರಾಜ್, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಾರ್ಬಳ್ಳಿ ನೀಲಕಂಠಪ್ಪ, ಬನ್ನೂರು ಸೂರಿ, ಕಾಟೂರು ನಾಗೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.