ಜಿಲ್ಲೆ

ಮೈಸೂರಿನಲ್ಲಿ 7ನೇ ದಿನಕ್ಕೆ ಕಾಲಿರಿಸಿದ ಕಬ್ಬು ಬೆಳೆಗಾರರ ಧರಣಿ

Mysuru

ಮೈಸೂರು: ಕಬ್ಬು ಬೆಳೆಗೆ ನಿಗದಿ ಪಡಿಸಿರುವ ಎಫ್‌ಆರ್‌ಪಿ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ 6ನೇ ದಿನವನ್ನು ಪೂರೈಸಿತು.

ಪಂಜಾಬ್‌ನಲ್ಲಿ ಟನ್ ಕಬ್ಬಿಗೆ 3800 ರೂ., ಉತ್ತರ ಪ್ರದೇಶದಲ್ಲಿ 3500 ರೂ., ಗುಜರಾತ್‌ನಲ್ಲಿ 4400 ರೂ. ದರ ನಿಗದಿ ಮಾಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕನಿಷ್ಠ ಟನ್ ಕಬ್ಬಿಗೆ 3,500 ರೂ.ನಿಗದಿ ಮಾಡಬೇಕು. ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. 16 ತಿಂಗಳು ಕಳೆದರೂ ಕಬ್ಬು ಕಟಾವು ಆಗುತ್ತಿಲ್ಲ. ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುಂದೆ 6 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಲಿಲ್ಲ. ಸಚಿವರು ಇದುವರೆಗೆ ರೈತರ ಕುಂದು ಕೊರತೆಗಳನ್ನು ಆಲಿಸಲು ಸಭೆಯನ್ನು ನಡೆಸಲಿಲ್ಲ. ರೈತರನ್ನು ಇದೇ ರೀತಿ ನಿರ್ಲಕ್ಷೃ ಭಾವದಿಂದ ಸರ್ಕಾರ ನೋಡಿದರೆ ತೀವ್ರ ತರದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ ಸೋಮಶೇಖರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆರಹುಂಡಿ ರಾಜಣ್ಣ, ಹಾಡ್ಯ ರವಿ, ಕುರುಬೂರ್ ಸಿದ್ದೇಶ್, ಪ್ರಸಾದ್ ನಾಯಕ್, ಹಿರಿಯೂರ್ ನವೀನ, ಗೌರಿಶಂಕರ್, ಗುರುಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.