ಚನ್ನರಾಯಪಟ್ಟಣ: ನೀರಾವರಿ ಯೋಜನೆಯಲ್ಲಿ ಸೇರ್ಪಡೆಯಾಗಿರುವ ತಾಲೂಕಿನ ದಾಸಪುರದಿಂದ ವಡ್ಡರಹಳ್ಳಿಯವರೆಗೂ ಕಾಲುವೆಯಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಹೇಮಾವತಿ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಾಗೂರು ಏತ ನೀರಾವರಿ ವ್ಯಾಪ್ತಿಯ ದಾಸಾಪುರ ದಡ್ಡಿಹಳ್ಳಿ-ಗೊಲ್ಲರಹೊಸಹಳ್ಳಿ ಕಲ್ಕೆರೆ ವಡ್ಡರಹಳ್ಳಿ ಗ್ರಾಮಗಳ ರೈತರು ಹಾಗೂ ಸಂಘಟನೆಯ ಮುಖಂಡರು ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಹೇಮಾವತಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಹೇಮಾವತಿ ಕಚೇರಿ ಮುಂದೆ ಜಮಾಯಿಸಿದರು.
ಹೇಮಾವತಿ ನಾಲಾ ವ್ಯಾಪ್ತಿಯ ಬಾಗೂರು ಏತ ನೀರಾವರಿ ಭಾಗದ ನಿರ್ವಹಣೆ ಮಾಡುವ ಇಂಜಿನಿಯರ್ ಅವರ ರೈತ ವಿರೋಧಿ ನಿಲುವಿನಿಂದಾಗಿ ರೈತ ಸಮುದಾಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಧಿಕಾರಿಗಳ ಕ್ರಮ ಖಂಡಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಬಾಗೂರು ಏತನೀರಾವರಿ ವ್ಯಾಪ್ತಿಯ ದಾಸಾಪುರ, ದಡ್ಡಿಹಳ್ಳಿ ಗೊಲ್ಲರಹೊಸಹಳ್ಳಿ, ಕಲ್ಕೆರೆ, ವಡ್ಡರಹಳ್ಳಿ, ಗ್ರಾಮಗಳ ಜಮೀನಿನಲ್ಲಿ ಕೃಷಿಗೆ ನೀರಾವರಿಯ ಉದ್ದೇಶದಿಂದ ಸೀಳುಗಾಲುವೆ, ಕಿರುಗಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ ಸರ್ಕಾರದ ಕೋಟ್ಯಂತರ ರೂ. ಈ ಕಾಲುವೆಗಳ ನಿರ್ಮಾಣಕ್ಕೆ ವೆಚ್ಚವಾಗಿದೆ. ಅಂದರೆ ಅದು ಸಾರ್ವಜನಿಕರ ಹಣವೇ ಆಗಿದೆ. ಕಾಲುವೆ ನಿರ್ಮಾಣವಾಗಿ 20 ವರ್ಷಗಳೇ ಕಳೆದಿದ್ದರೂ ಈ ಕಾಲುವೆಗಳಲ್ಲಿ ಇದೂವರೆಗೂ ನೀರು ಹರಿದಿಲ್ಲ. ಈ ಕುಲುವೆಗಳಲ್ಲಿ ಗಿಡಗಂಟಿ ಬೆಳೆದಿವೆ. ಕೆಲವೆೆ ಕಾಲುವೆ ಮುಚ್ಚಿ ಹೋಗಿದೆ. ಈ ಏತನೀರಾವರಿ ಮೂಲಕ ಈ ಭಾಗದ ಕೆರೆಗಳಿಗೆ ನೀರು ಹರಿಸಿದರೆ ಇದರಿಂದ ನೂರಾರು ರೈತ ಕುಟುಂಬಗಳು ಹಾಗೂ 5 ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನೀರಾವರಿ ಹೋರಾಟ ಸಮಿತಿಯ ಮುಖಂಡ ಎಚ್.ಎಸ್. ಮಂಜುನಾಥ್ ಮಾತನಾಡಿ, ಬಾಗೂರು-ನವಿಲೆ ಏತನೀರಾವರಿ ಯೋಜನೆಯಲ್ಲಿ 10 ಸಾವಿರ ಎಕರೆ ಪ್ರದೇಶದ ವ್ಯವಸಾಯಕ್ಕಾಗಿ ನೀರು ಕೊಡಬೇಕು. ಅದನ್ನು ಸಮರ್ಪಕವಾಗಿ ರೈತರ ಜಮೀನಿಗೆ ನೀಡಬೇಕು. ಈಗಾಗಲೇ ನಿರ್ಮಾಣವಾಗಿರುವ ಕಾಲವೆಯಲ್ಲಿ ದಾಸಾಪುರದಿಂದ ವಡ್ಡರಹಳ್ಳಿಯವರೆಗೆ ನೀರು ಹರಿಸಬೇಕು. ಏತ ನೀರಾವರಿ ಯೋಜನೆಯಲ್ಲಿ ಸೇರಿರುವ ಎಲ್ಲ ಕಿರುಗಾಲುವೆಗಳನ್ನು ದುರಸ್ತಿ ಮಾಡಿ ವ್ಯವಸಾಯಕ್ಕೆ ನೀರು ಕೊಡಬೇಕು. ಕಾಲುವೆಗಳನ್ನು ನಿರ್ಮಾಣ ಮಾಡುವಾಗ ಮತ್ತು ದುರಸ್ತಿ ಮಾಡುವಾಗ ಗುಣಮಟ್ಟ ಕಾಪಾಡಬೇಕು ಎಂದು ಒತ್ತಾಯಿಸಿದರು.
ದಾಸಾಪುರದ ನೀರು ಬೀಳುವ ಪಾಯಿಂಟ್ ಅನ್ನು ಗುಣಮಟ್ಟ ಮತ್ತು ವೈಜ್ಞಾನಿಕವಾಗಿ ಮಾಡಬೇಕು. ಈ ಕಾಲುವೆಯ ನೀರು ಗೊಲ್ಲರಹೊಸಹಳ್ಳಿ ಕೆರೆ ಹಾಗೂ ಕಟ್ಟೆಗಳಿಗೆ ಒದಗಿಸಬೇಕು. ಬಾಗೂರು ನವಿಲೆ ಯೋಜನೆಯಡಿ ಸೇರಿರುವ, ನಿರ್ವಹಣೆ ಮಾಡದೆ ನೀರು ಹರಿಸದೆ ಇರುವ ಎಲ್ಲ ಕಾಲುವೆಗಳಲ್ಲಿ ಹರಿಸಬೇಕು. ಚನ್ನರಾಯಪಟ್ಟಣ ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ಏತನೀರಾವರಿ ಯೋಜನೆಗಳನ್ನು ಶೀರ್ಘವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಸೆ.4 ರಂದು ಬಾಗೂರು ಇಂಜಿನಿಯರ್ ಕಚೇರಿಯಲ್ಲಿ ಅಲ್ಲಿನ ಇಇಇ ಮೂಲಕ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದ್ದೇವೆ. ಇಇ ಅನ್ನು ಭೇಟಿ ಮಾಡಿ, ಈ ಕಾಲುವೆಗಳಲ್ಲಿ ತುರ್ತಾಗಿ ನೀರು ಹರಿಸುವಂತೆ ಒತ್ತಾಯಿಸಿದ್ದೇವೆ. ಆದರೂ ಏನು ಪ್ರಯೋಜನವಾಗಿಲ್ಲ. ಇನ್ನೂ ವಿಳಂಬ ಮಾಡದೆ ಕೂಡಲೇ ಸೀಳುಗಾಲುವೆ, ಕಿರುಗಾಲುವೆಗಳನ್ನು ರಿಪೇರಿ ಮಾಡಿ ನೀರು ಹರಿಸಬೇಕು ನಿರ್ದಿಷ್ಟ ಕಾಲಾವಧಿಯ ಒಳಗೆ ಈ ಸಮಸ್ಯೆ ಬಗೆಹರಿಸಿ ಕಾಲುವೆಗಳಿಗೆ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರತರವಾದ ಅನಿರ್ದಿಷ್ಟಾವಧಿ ಹೋರಾಟವನ್ನು ಹಮ್ಮಿಗೊಳ್ಳಲಾಗುತ್ತದೆ. ಎಂದು ಒತ್ತಾಯಿಸಿ ನೀರಾವರಿ ಇಲಾಖೆಯ ಎಇಇ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶಂಕರಣ್ಣ ಬರಗೂರು, ದೊರೆ ಕಬ್ಬಳಿ, ತೇಜಸ್ ಗೌಡ ಗೋವಿನಕೆರೆ, ಚೈತನ್ಯಕುಮಾರ್ ಗೊಲ್ಲರಹೊಸಹಳ್ಳಿ, ಸುಜಾತ ಕುಮಾರಸ್ವಾಮಿ, ಮಂಜೇಗೌಡ ಜೋಗಿಪುರ, ಚಂದ್ರಹಾಸ್ ಜಿನ್ನೇನಹಳ್ಳಿ, ಲೋಕೇಶ್ ಮಡಬ, ಸ್ವಾಮಿಗೌಡ ಬಂಡಿಹಳ್ಳಿ ಭಾಗವಹಿಸಿದ್ದರು.