ಮಂಡ್ಯ: ಜಮೀನಿನಲ್ಲಿ ಬೆಳೆದು ನಿಂತಿರುವ ಬೆಳೆಯನ್ನು ಉಳಿಸಿಕೊಳ್ಳಲು ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನೀರು ಹರಿಸಬೇಕೆಂಬ ಒತ್ತಾಯದೊಂದಿಗೆ ಜಿಲ್ಲೆಯ ರೈತರು ಬೀದಿಗಿಳಿದಿದ್ದಾರೆ.
ರೈತ ಸಂಘದ ಕಾರ್ಯಕರ್ತರು ಜು.17ರಂದು ಕಾವೇರಿ ನೀರಾವರಿ ನಿಗಮಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರ ಹೊರತಾಗಿಯೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ ಮೌಲ್ಯದ ಬೆಳೆ ನೀರಿಲ್ಲದೆ ಒಣಗುತ್ತಿವೆ. ಮುಂಗಾರು ಮಳೆ ಕೊರತೆಯಿಂದ ಕಬ್ಬು, ಭತ್ತ, ರಾಗಿ, ತರಕಾರಿ ಸೇರಿದಂತೆ ಇತರೆ ಬೆಳೆಗಳಿಗೆ ನೀರಿಲ್ಲದಂತಾಗಿದೆ. ಸಧ್ಯಕ್ಕೆ ಬೆಳೆಗಳ ರಕ್ಷಣೆಗೆ ತುರ್ತು ನೀರಿನ ಅವಶ್ಯಕತೆ ಇದೆ. ಒಂದು ವೇಳೆ ನೀರು ಹರಿಸದಿದ್ದರೆ ಬೆಳೆ ಸಂಪೂರ್ಣ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಕೆಆರ್‌ಎಸ್ ಜಲಾಶಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ನಾಲೆಗಳಿಗೆ ತುರ್ತಾಗಿ ನೀರು ಬಿಡುಗಡೆ ಮಾಡಿದರೆ ಬೆಳೆಗಳ ರಕ್ಷಣಿ ಸಾಧ್ಯವಾಗಲಿದೆ. ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ವಾಸ್ತವ ಮನವರಿಕೆ ಮಾಡಿಕೊಂಡು ರೈತರ ಹಿತ ಕಾಯಲು ಮುಂದಾಗಬೇಕು. ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷೃ ತೋರಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತು ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಬೊಮ್ಮೇಗೌಡ, ಲತಾ ಶಂಕರ್, ಜವರೇಗೌಡ, ಸುರೇಶ್ ಗೋಪಾಲಪುರ, ನಾಗರಾಜು, ಮಲ್ಲೇಶ್, ದೊಡ್ಡಸ್ವಾಮಿ, ಮಹದೇವ ಗಾಣದಾಳು ಇತರರಿದ್ದರು.