ಜಿಲ್ಲೆ

ಜಮೀನು ಸರ್ವೇಗೆ ರೈತರ ಪರದಾಟ

400ಕ್ಕೂ ಹೆಚ್ಚು ಅರ್ಜಿಗಳು ವಿಲೇಗೆ ಬಾಕಿ

ಎನ್.ವಿ.ವೆಂಕಟೇಶ, ಗುಡಿಬಂಡೆ

ತಾಲೂಕಿನಲ್ಲಿ ಕಳೆದ 2 ತಿಂಗಳುಗಳಿಂದ ಸರ್ವೇ ಕಾರ್ಯ ಸ್ಥಗಿತಗೊಂಡಿದ್ದು, ಜಮೀನು ವಿಭಾಗ, ತಾತ್ಕಾಲ್ ಪೋಡಿ ಸೇರಿ ಇತರ ಸೇವೆಗಳಿಗೆ ರೈತರು ಪರದಾಡುವಂತಾಗಿದೆ.

ಹೌದು..! ತತ್ಕಾಲ್ ಪೋಡಿ, ಹದ್ದುಬಸ್ತ್ , ಲೆವೇನ್ಯೂ ನಕ್ಷೆ, ಅಲಿನೇಷನ್ ನಕ್ಷೆಗಳಿಗೆ 2 ತಿಂಗಳಿನಿಂದ ಸಲ್ಲಿಕೆಯಾಗಿರುವ ಸುಮಾರು 400ಕ್ಕೂ ಹೆಚ್ಚು ಅರ್ಜಿಗಳನ್ನು ಸರ್ವೆಯರ್‌ಗಳು ತಾಲೂಕಿನಲ್ಲಿ ದರಖಾಸ್ತು ಜಮೀನುಗಳನ್ನು ಸರ್ವೇ ಮಾಡುತ್ತಿದ್ದೇವೆಂದು ನೆಪ ಹೇಳಿ ವಿಲೇ ಮಾಡದೆ ಹಾಗೇ ಇಟ್ಟಿದ್ದಾರೆ. ಪರಿಣಾಮ ತಂದೆಯಿಂದ ಮಕ್ಕಳಿಗೆ ಜಮೀನು ವಿಭಾಗ, ತತ್ಕಾಲ್ ಪೋಡಿ ಸೇರಿ ಇತರ ಸೇವೆಗಳಿಗೆ ರೈತರು ನಿತ್ಯ ಸರ್ವೇ ಇಲಾಖೆಗೆ ಅಲೆಯುವಂತಾಗಿದೆ.

ಈ ಬಗ್ಗೆ ಸರ್ವೇಯರ್‌ಗಳನ್ನು ವಿಚಾರಿಸಿದರೆ ದರಖಾಸ್ತು ಅರ್ಜಿಗಳ ಸರ್ವೇ ಮಾಡುತ್ತಿರುವುದರಿಂದ ಲಾಗಿನ್ ಸ್ಥಗಿತಗೊಂಡಿದ್ದು, ಮೇಲಧಿಕಾರಿಗಳು ಲಾಗಿನ್ ನೀಡಿ, ಸರ್ವೇ ಮಾಡುವಂತೆ ಸೂಚಿಸಿದರೆ ಸರ್ವೇ ಮಾಡುತ್ತೇವೆ ಎನ್ನುತ್ತಾರೆ. ಮೇಲಧಿಕಾರಿಗಳು ಇನ್ನಾದರೂ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲಿ ಎಂದು ಆಗ್ರಹಿಸುತ್ತಿದ್ದಾರೆ.