ಜಮೀನು ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಮಾಡಾಳು ಗ್ರಾಮದ ತಿಮ್ಮಯ್ಯ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು. ಅಜ್ಜಪ್ಪ ಇದ್ದರು. 
ಜಿಲ್ಲೆ

ಜಮೀನು ಖಾತೆಗಾಗಿ ರೈತನ ಧರಣಿ

ಅರಸೀಕೆರೆ: ಜಮೀನು ಖಾತೆ ಮಾಡಿಕೊಡಲು ಕಂದಾಯ ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಡಾಳು ಗ್ರಾಮದ ರೈತ ತಿಮ್ಮಯ್ಯ ತಾಲೂಕು ಕಚೇರಿ ಎದುರು ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.

ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ನಡೆಸಿದ ಗ್ರಾಮ ವಾಸ್ತವ್ಯದ ಸಮಯದಲ್ಲಿಯೂ ಅರ್ಜಿ ಕೊಟ್ಟಿದ್ದೇನೆ. ಹೀಗಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಅಧಿಕಾರಿಗಳ ವಿಳಂಬ ಧೋರಣೆಗೆ ಬೇಸತ್ತು ಹೋರಾಟದ ಹಾದಿ ಹಿಡಿಯುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಧರಣಿಗೆ ಕೈ ಜೋಡಿಸಿದ ಸಾಮಾಜಿಕ ಕಾರ್ಯಕರ್ತ ಹೊಸಹಳ್ಳಿ ಅಜ್ಜಪ್ಪ ಮಾತನಾಡಿ, ಜನಸ್ಪಂದನ ಕಾರ್ಯಕ್ರಮಲ್ಲಿ ಖಾತೆ ಮಾಡುವುದು, ಪಹಣಿ ತಿದ್ದುಪಡಿ ಸೇರಿದಂತೆ ರೈತಪರ ಕೆಲಸ ಮಾಡುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ಓದು, ಬರಹ ಬಾರದ ಅನ್ನದಾತನನ್ನು ಸತಾಯಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎನ್ನುವುದಕ್ಕೆ ತಾಲೂಕು ಆಡಳಿತವೇ ಉತ್ತರ ನೀಡಬೇಕು. ನ್ಯಾಯ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷ ಮನವಿ ಆಲಿಸಿದರು. ಖಾತೆ ಮಾಡಿಕೊಡುವ ಸಂಬಂಧ ಉನ್ನತಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಮನವೊಲಿಸಿದ ಬಳಿಕ ತಿಮ್ಮಯ್ಯ ಪ್ರತಿಭಟನೆ ಹಿಂಪಡೆದರು.