ಜಿಲ್ಲೆ

7 ತಾಸು ನಿರಂತರ ಕರೆಂಟ್ ಕೊಡಿ

ಸೋಮನಾಥ ರೆಡ್ಡಿ

ಮುಂಡರಗಿ: ರೈತರ ಪಂಪ್‌ಸೆಟ್‌ಗಳಿಗೆ ಹಗಲಲ್ಲಿ ನಿರಂತರ 7 ತಾಸು ತ್ರೀಪೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಶಿಂಗಟಾಲೂರು ಗ್ರಾಮದ ವಿದ್ಯುತ್ ಪ್ರಸರಣ ಘಟಕವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಹೆಸ್ಕಾಂ ಅಧಿಕಾರಿಗಳು ಈಗ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ರೈತರು ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗಿದೆ. ಮೊದಲೇ ಮಳೆ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಇಲ್ಲದೆ ಕಾರಣ ಬೆಳೆಗಳಿಗೆ ನೀರುಣಿಸುವುದು ಕಷ್ಟವಾಗಿದೆ. ಬೆಳೆಗಳು ಒಣಗುವ ಸ್ಥಿತಿ ತಲುಪಿವೆ. ಆದ್ದರಿಂದ ಹೆಸ್ಕಾಂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಿರಂತರವಾಗಿ 7 ತಾಸು ತ್ರೀಪೇಸ್ ವಿದ್ಯುತ್ ಪೂರೈಸಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಪ್ರಭಾರಿ ಎಇಇ ಚನ್ನಪ್ಪ ಲಮಾಣಿ ಅವರು ರೈತರೊಂದಿಗೆ ಚರ್ಚಿಸಿ, ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 7 ತಾಸು ತ್ರೀಪೇಸ್ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಗದಗ ಹೆಸ್ಕಾಂ ಇಇ ರಾಜೇಶ ಕಲ್ಯಾಣ ಶೆಟ್ಟರ ಅವರು, ಆ.23ರಂದು ಶಿಂಗಟಾಲೂರು ಗ್ರಿಡ್‌ಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು. ಸುಮಾರು 2 ತಾಸು ಗ್ರಿಡ್ ಬಂದ್ ಮಾಡಲಾಗಿತ್ತು.
ಹನುಮಂತ ಛಬ್ಬಿ, ಪರಸಪ್ಪ ಹೈತಾಪುರ, ಈರಪ್ಪ ಕಲಕೇರಿ, ಬಾಬು ಪುಟ್ಟಣವರ, ರಾಜು ಉಜರತ್ತಿ, ಮಾಬುಸಾಬ ಬಳ್ಳಾರಿ, ರಾಜಶೇಖರ ಕೊಂಚಣ್ಣವರ, ರಂಜಿತ್ ಮಧ್ಯಪಾಟಿ, ದ್ಯಾಮಪ್ಪ ಶೀರನಹಳ್ಳಿ, ಬಸಪ್ಪ ಜಂತ್ಲಿ ಇತರರು ಇದ್ದರು.