ವಿವಿಧ ಸಮಸ್ಯೆಯನ್ನು ಬಗೆಹರಿಸುವಂತೆ ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವನ್ನು ಖಂಡಿಸಿ ಅಜ್ಜೀಪುರ ಗ್ರಾಮದ ನೀರಾವರಿ ನಿಗಮ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ಗೌಡೇಗೌಡ, ಅಮ್ಜಾದ್‌ಖಾನ್, ಶೈಲೇಂದ್ರ, ರಾಜಮಣಿ, ಪೂಂಗೂಡಿ, ವೆಂಕಟಾಚಲ ಇತರರು ಇದ್ದರು. 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

 ಹನೂರು: ಉಡುತೊರೆ ಜಲಾಶಯ ವ್ಯಾಪ್ತಿಯ ರೈತರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಹಾಗೂ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯವನ್ನು ಖಂಡಿಸಿ ಸೋಮವಾರ ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ತಾಲೂಕು ರೈತ ಸಂಘಟನೆಯಿಂದ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಜಲಾಶಯ ವ್ಯಾಪ್ತಿಯ ನೂರಾರು ರೈತರು ಅಜ್ಜೀಪುರ ಗ್ರಾಪಂನಿಂದ ಮುಖ್ಯರಸ್ತೆ ಮೂಲಕ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತೆರಳಿ ನೀರಾವರಿ ನಿಗಮದ ಕಚೇರಿ ಮುಂದೆ ಧರಣಿ ಕುಳಿತರು.

ಈ ವೇಳೆ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಉಡುತೊರೆ ಜಲಾಶಯ ವ್ಯಾಪ್ತಿಯಲ್ಲಿ ಅಜ್ಜೀಪುರ ಸೇರಿದಂತೆ, ರಾಮಾಪುರ, ಕೌದಳ್ಳಿ ಹಾಗೂ ಕುರಟ್ಟಿ ಹೊಸೂರು ವ್ಯಾಪ್ತಿಯ ರೈತರು ಕೃಷಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ವ್ಯಯಿಸಿ 17.5 ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಸೌಕರ್ಯ ಒದಗಿಸಲು ಜಲಾಶಯವನ್ನು ನಿರ್ಮಿಸಲಾಗಿದೆ. ಆದರೆ ಎಡ ಹಾಗೂ ಬಲದಂಡೆ ಕಾಲುವೆಗಳಲ್ಲಿ ಹಲವು ವರ್ಷಗಳಿಂದ ಗಿಡಗಂಟಿ ಹಾಗೂ ಹೂಳು ತುಂಬಿದೆ. ಇದರಿಂದ ಕೊನೇ ಭಾಗದಲ್ಲಿರುವ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಇದರಿಂದ ರೈತರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಇನ್ನು ಜಲಾಶಯದ ನಿರ್ಮಾಣದ ವೇಳೆ ಕಾಲುವೆಗಳನ್ನು ನಿರ್ಮಿಸಲು ಈ ಭಾಗದ ರೈತರ ಜಮೀನಿನ ಕೆಲ ಭಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪರಿಹಾರ ನೀಡುವಂತೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈವರೆಗೂ ಪರಿಹಾರ ಬಂದಿಲ್ಲ. ಇದರಿಂದ ಕಚೇರಿಗೆ ಅಲೆಯುಂತಾಗಿದೆ. ಇತ್ತ ಮಳೆಗಾಲದಲ್ಲಿ ಅವಶ್ಯಕತೆ ಇಲ್ಲದ ವೇಳೆಯು ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ವ್ಯರ್ಥವಾಗುತ್ತಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕುವುದರ ಜತೆಗೆ ಬೇಸಿಗೆಯಲ್ಲಿ ಸಮರ್ಪಕ ನೀರಾವರಿ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ: ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಅಜ್ಜೀಪುರ ಗ್ರಾಪಂ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಿಲ್ಲ. ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಇದರಿಂದ ಗ್ರಾಮಗಳಲ್ಲಿ ಅನೈರ್ಮಲ್ಯ ಮನೆ ಮಾಡಿದ್ದು, ಜನರು ರೋಗ ರುಜಿನಗಳು ಹರಡುವ ಭೀತಿಯಲ್ಲಿದ್ದಾರೆ. ಸ್ವಚ್ಛತೆ, ಕುಡಿಯುವ ನೀರು ಹಾಗೂ ಬೀದಿ ದೀಪಗಳ ನಿರ್ವಹಣೆ ಹಾಗೂ ಇನ್ನಿತರೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ಗ್ರಾಪಂ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಇಲ್ಲಿನ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಇ ಸ್ವತ್ತು ನೀಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹಾಗೆಯೇ ನರೇಗಾ ಯೋಜನೆಯಡಿ ಸರಿಯಾಗಿ ಮಾನವ ಶ್ರಮ ಬಳಕೆಯಾಗುತ್ತಿಲ್ಲ. ಇದರಿಂದ ಜನರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಅಗತ್ಯ ಭರವಸೆ: ಈ ವೇಳೆ ನೀರಾವರಿ ನಿಗಮದ ಇಇ ರಮೇಶ್ ಮಾತನಾಡಿ, ನಾಲೆಯಲ್ಲಿ ಹೂಳು ತೆಗೆಸುವುದರ ಮೂಲಕ ಕೊನೆ ಭಾಗದವರೆಗೂ ಸಮರ್ಪಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಜಮೀನು ಸ್ವಾಧೀನಕ್ಕೆ ಪರಿಹಾರ ದೊರಕಿಸಿ ಕೊಡಲಾಗುವುದು. ನೀರು ವ್ಯರ್ಥವಾಗದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಇಒ ಉಮೇಶ್ ಮಾತನಾಡಿ, ರೈತರ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಬಗೆಹರಿಸಲಾಗುವುದು. ಜತೆಗೆ ಡಿಸೆಂಬರ್‌ನಲ್ಲಿ ಪಿಡಿಒ ಹಾಗೂ ರೈತರ ಸಭೆ ಕರೆದು ಇರುವ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಸಂಘದ ಕಾರ್ಯದರ್ಶಿ ಬಸವರಾಜು, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಪೂಂಗುಡಿ, ಪದಾಧಿಕಾರಿಗಳಾದ ಕನಕಮ್ಮ, ವೆಂಕಟಾಚಲ, ರಾಜಣ್ಣ, ಶಿವಣ್ಣ, ವೇಲುಸ್ವಾಮಿ, ತಂಗವೇಲು, ರತ್ನವೇಲು ಹಾಗೂ ಇನ್ನಿತರರು ಇದ್ದರು.