ನ್ಯಾಯಯುತ ಪರಿಹಾರಕ್ಕೆ ಅಗ್ರಹಿಸಿ ಬೆಂಡೇಕೆರೆ ಗ್ರಾಮಸ್ಥರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸುತ್ತಿರುವ ದೃಶ್ಯ.್ಣ ಅಶೋಕ್, ಉಮೇಶ್, ಶಿವಮೂರ್ತಿ,ರಾಜಣ್ಣ, ವಿಜಯಕುಮಾರ್, ಪಂಚಾಕ್ಷರಿ, ಕುಮಾರಣ್ಣ ಚನ್ನೇಗೌಡ 
ಜಿಲ್ಲೆ

ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಶಿವಶಂಕರ್ ಎಂ. ಹೆಬ್ಬಳ್ಳ

ಅರಸೀಕೆರೆ : ತುಮಕೂರು, ಶಿವಮೊಗ್ಗ ಸಂಪರ್ಕಿಸುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ(206) ಕಾಮಗಾರಿಗೆ ವಶಪಡಿಸಿಕೊಂಡಿರುವ ಭೂಮಿಗೆ ನ್ಯಾಯಯುತ ಪರಿಹಾರ ನೀಡುವಂತೆ ತ್ತಾಯಿಸಿ ಸಂತ್ರಸ್ತ ರೈತರು ಸೋಮವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಭೂ ಸಂತ್ರಸ್ತ ಕುಮಾರಣ್ಣ ಮಾತನಾಡಿ, ಜೀವ ಬಿಟ್ಟೇವು, ಭೂಮಿ ಕೊಡೆವು, ನ್ಯಾಯಯುತ ಪರಿಹಾರ ಕೊಡಿ, ಇಲ್ಲವೇ ಜಾಗ ಖಾಲಿ ಮಾಡಿ, ಬಲವಂತದ ಕಾಮಗಾರಿಗೆ ಮುಂದಾದರೆ ಹೆಣಗಳ ಮೇಲೆ ಟಿಪ್ಪರ್, ರೋಲರ್ ಹತ್ತಿಸಿದರೂ ಹೆದರುವ ಪ್ರಶ್ನೆಯಿಲ್ಲ. ಏಕಾಏಕಿ ಕಾಮಗಾರಿ ನಡೆಸಲು ಮುಂದಾಗಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಲೋಕಸಭಾ ಸದಸ್ಯರಾಗಿದ್ದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಕಳೆದ ವರ್ಷ ಸಭೆ ನಡೆಸಿ ಪ್ರತಿ ಗುಂಟೆ ಜಮೀನಿಗೆ 36 ಸಾವಿರ ರೂ. ಪರಿಹಾರ ನೀಡಲು ಒಪ್ಪಿಗೆ ನೀಡಲಾಗಿತ್ತು. ಇದೀಗ ಕೇವಲ 11,232 ರೂ. ನೀಡಿ ಕೈ ತೊಳೆದುಕೊಳ್ಳಲು ಹೊರಟಿರುವುದು ಸರಿಯಲ್ಲ. ನುಡಿದಂತೆ ನಡೆಯಬೇಕು ಇಲ್ಲವೇ ಕೆಲಸ ನಿಲ್ಲಿಸಬೇಕು. ನ್ಯಾಯ ದೊರೆಯುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ. ಯಾವುದೇ ಮುನ್ಸೂಚನೆ ನೀಡದೆ ಹೀಗೆ ಯಂತ್ರೋಪಕರಣಗಳ ಜತೆ ದಾಂಗುಡಿಯಿಟ್ಟರೆ ಹೇಗೆ? ಪರಿಹಾರದ ಮೊತ್ತ ಪರಿಶೀಲಿಸಿ, ನಂತರವೇ ಕಾಮಗಾರಿ ಮುಂದುವರಿಸಿ. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಜಾನುವಾರುಗಳ ಜತೆ ಕುಳಿತು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಪಟ್ಟುಹಿಡಿದರು.

ತಾಲೂಕಿನ ಬೆಂಡೇಕೆರೆ ಗ್ರಾಮಕ್ಕೆ ಬೆಳ್ಳಂಬೆಳಗ್ಗೆ ಕಾಮಗಾರಿ ನಿರ್ವಹಿಸಲು ಬಂದಿದ್ದ ಯಂತ್ರೋಪಕರಣಗಳನ್ನು ರೈತರು ತಡೆದು ನಿಲ್ಲಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಧರ್ಮಪಾಲ್, ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ರೈತರ ಮನವೊಲಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.

ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಜಮೀನು ಕಳೆದುಕೊಳ್ಳುವ ಆತಂಕ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ರೈತರು ಶಾಮಿಯಾನ ಹಾಕಿ ಕುಳಿತಿದ್ದರು. ಮಧ್ಯಾಹ್ನ ರಸ್ತೆ ಮಧ್ಯೆಯೇ ಅಡುಗೆ ಮಾಡಿ ಆಕ್ರೋಶ ಹೊರಹಾಕಿದರು.

ಕಾಮಗಾರಿ ನಡೆಸಲು ತಂದಿದ್ದ ಹಿಟಾಚಿ, ಜೆಸಿಬಿ, ಟಿಪ್ಪರ್ ಹಾಗೂ ಟ್ಯಾಂಕರ್ ವಾಪಸ್ ಕಳುಹಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಡಿವೈಎಸ್‌ಪಿ ಬಿ.ಆರ್.ಗೋಪಿ, ಗ್ರಾಮಾಂತರ ಸಿಪಿಐ ಅರುಣ್ ಕುಮಾರ್ ಹಾಗೂ ಬಾಣಾವರ ಪಿಎಸ್‌ಐ ಸುರೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಮುಖಂಡರಾದ ಸುರೇಶ್ , ಭೈರಗೊಂಡನಹಳ್ಳಿ ಉಮೇಶ್, ಶಿವಮೂರ್ತಿ,ರಾಜಣ್ಣ, ವಿಜಯಕುಮಾರ್, ಹಸಿರುಸೇನೆ ಚಂದ್ರಶೇಖರ್, ಪಂಚಾಕ್ಷಿ, ಚನ್ನೇಗೌಡ ಇತತರರಿದ್ದರು.-