ವಿಜಯಪುರ: ಜಿಲ್ಲೆಯ 2ನೇ ಅತೀ ದೊಡ್ಡ ಜಂಬಗಿ ಕೆರೆ ತುಂಬಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶನಿವಾರ 3ನೇ ದಿನಕ್ಕೆ ಕಾಲಿರಿಸಿತು.
ಕೆರೆಯಲ್ಲಿಯೇ ಟೆಂಟ್ ಹಾಕಿ ಧ್ವಜ ನೆಟ್ಟು ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭೀಕರ ಬರದಿಂದ ಕೆರೆ ಬರಿದಾಗಿದೆ. ಕೆರೆಗಳಿಗೆ ನೀರು ತುಂಬುವ ಯೋಜನೆಯಡಿ ಕೂಡಲೇ ಜಂಬಗಿ ಕೆರೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಜಂಬಗಿ, ಹುಣಶ್ಯಾಳ ಮಾದಾಳ ಕೆರೆಗೆ ನೀರು ಹರಿಸಬೇಕು, ಇಲ್ಲವಾದಲ್ಲಿ ಈ ಭಾಗದ ಎಲ್ಲ ರೈತರು, ಮಹಿಳೆಯರು, ಮಕ್ಕಳು, ಜಾನುವಾರುವಿನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಮುಂಖಡ ಅನಮೇಶ ಜಮಖಂಡಿ ಮಾತನಾಡಿ, ಕಗ್ಗೊಡ ಗ್ರಾಮದಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ ಆಲಮಟ್ಟಿಯಿಂದ 187 ಕಿಮೀ ನಾರಾಯಣಪುರಕ್ಕೆ ಹೋಗಿ ಮರಳಿ ದೇವರಹಿಪ್ಪರಗಿ ಕಾಲುವೆಗೆ ಬಂದು ಕೊನೆಯದಾಗಿ ಜಂಬಗಿವರೆಗೆ ನೀರು ಬರಬೇಕಾಗುವುದು, ಪ್ರತಿಸಲ ನೀರು ಈ ಭಾಗಕ್ಕೆ ಮುಟ್ಟುವುದರೊಳಗೆ ಅವಧಿ ಮುಗಿದು ನೀರು ಹರಿಸದೇ ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಕೆರೆಗೆ ನೀರು ತುಂಬಿಸುವವರೆಗೂ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕು ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಸದಸ್ಯರಾದ ಕಲ್ಲಪ್ಪ ಮಸೂತಿ, ರಾಜಾರಾಮಸಿಂಗ ಡೋಣೂರ, ರಾಮಸಿಂಗ ರಜಪೂತ, ಶ್ರೀಶೈಲ ಮುಡಗಿ, ನಾಗಪ್ಪ ಬೂತಿ, ಕಲ್ಲಪ್ಪ ತಳವಾರ, ವಿನೋದ ಬಡಿಗೇರ, ಭೀಮರಾಯ ಗೋರನಾಳ, ಬಸವಂತ ತೇಲಿ, ಸಂಗಮೇಶ ತೇಲಿ, ಜಯಸಿಂಗ ರಜಪೂತ, ಬಸವರಾಜ ಮಸೂತಿ ಮತ್ತಿತರರಿದ್ದರು.