ಮೈಸೂರು: ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘ (ರೈತ ಬಣ) ವತಿಯಿಂದ ನಗರದ ಜಿಲ್ಲಾ ಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿ ಮಾಡಿರುವ ರೈತರ ಬೆಳೆಗಳು ಜಮೀನಿನಲ್ಲೆ ಒಣಗಿಹೋಗಿದೆ. ಕಂಬಳ ಮತ್ತು ಕಾವೇರಿ ಆರತಿಗೆ ಕೊಟಿಗಟ್ಟಲೆ ಖರ್ಚು ಮಾಡುವ ರಾಜ್ಯ ಸರ್ಕಾರ ರೈತರಿಗೆ 2,500 ರೂ. ಪರಿಹಾರ ಎಂಬ ಭಿಕ್ಷೆ ನೀಡಿ ಕೈತೊಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಕಿಡಿ ಕಾರಿದರು.
ಕೂಡಲೇ ಒಣ ಭೂಮಿಗೆ ಪ್ರತಿ ಎಕರೆಗೆ 25,000 ರೂ., ನೀರಾವರಿ ಭೂಮಿಗೆ 50,000 ರೂ. ಪರಿಹಾರ ಘೋಷಿಸಬೇಕು. ಬರಗಾಲ ಬಂದರೆ ಗ್ರಾಮೀಣ ಅರ್ಥವ್ಯವಸ್ಥೆವು ಸಮಗ್ರವಾಗಿ ಕುಸಿತ ಕಾಣುತ್ತದೆ. ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ, ರೈತನ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ನಷ್ಟವನ್ನು ಅಳೆದು ಪರಿಹಾರ ನೀಡಬೇಕಿದೆ. ಅಂತಹದರಲ್ಲಿ ಕೇವಲ 2,500 ರೂ. ಭಿಕ್ಷೆ ನೀಡಿ ಈ ಸರ್ಕಾರ ಅನ್ನದಾತನನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದು ದುಖಃದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೀಕರ ಬರಗಾಲವಿದ್ದರೂ ಮೈಸೂರು ದಸರಾ ಸರಳವಾಗಿ ಆಚರಣೆ ಮಾಡುವ ಬದಲು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಂಬಳ ಮತ್ತು ಕಾವೇರಿ ಆರತಿಗೆ ಕೋಟ್ಯಾಂತರ ರೂ. ವಿನಿಯೋಗಿಸಲಾಗುತ್ತಿದೆ. ಈ ಹಣವನ್ನು ರೈತರ ಒಳಿತಿಗೆ ಬಳಕೆ ಮಾಡಬಹುದಿತ್ತು ಎಂದರು.
ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬೀರಪ್ಪ ದೇಶನೂರು, ಬಸವನಗೌಡ, ಚಿನಕುರಳಿ ಸೋಮೇಗೌಡ, ನಂಜಪ್ಪ, ಲೋಕೇಶ್, ಸಿದ್ದಪ್ಪಾಜಿ ನಾಯಕ, ಶಿವಪ್ರಸಾದ್, ದ್ರಾಕ್ಷಾ ಶಿವರಾಮ್, ಯೋಗೇಶ್ ಮುಂತಾದವರು ಇದ್ದರು