ಮೈಸೂರು: ಜಿಲ್ಲೆಯ ರೈತರನ್ನು ಕರೂರ್ ವೈಶ್ಯ ಬ್ಯಾಂಕ್ ವಂಚಿಸಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಮರಿಮಲ್ಲಪ್ಪ ಕಾಲೇಜಿನ ಬಳಿ ಇರುವ ಬ್ಯಾಂಕ್ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಸಾಲ ಕೊಡಿಸಲು ಎಚ್.ಡಿ.ಕೋಟೆ, ನಂಜನಗೂಡು, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನ ನೂರಾರು ರೈತರಿಂದ ಮಧ್ಯವರ್ತಿಗಳ ಮೂಲಕ ದಾಖಲೆ ಪಡೆದುಕೊಂಡಿತ್ತು.
4 ಲಕ್ಷ ರೂ. ಸಾಲ ಮಂಜೂರು ಮಾಡಿ ರೈತರಿಗೆ ಮಾತ್ರ 2 ಲಕ್ಷ ರೂ. ಪಾವತಿಸಿದೆ. ಉಳಿದ 2 ಲಕ್ಷ ರೂ.ಗಳನ್ನು ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು ಲಪಟಾಯಿಸಿ ರೈತರಿಗೆ ವಂಚಿಸಿದ್ದಾರೆ ಎಂದು ದೂರಿದರು.
ಈ ಕುರಿತು ತನಿಖೆ ನಡೆಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಸದರಿ ಅಧಿಕಾರಿಗಳನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ. ವಾಸ್ತವ ಹೀಗಿದ್ದರೂ ಪೂರ್ಣ ಸಾಲ, ಬಡ್ಡಿ ಪಾವತಿ ಮಾಡುವಂತೆ ರೈತರ ಮೇಲೆ ಒತ್ತಡ ಹೇರುತ್ತಿದೆ. ಇದು ಸರಿಯಲ್ಲ. ಇದನ್ನು ಕೈಬಿಡಬೇಕು. ರೈತರಿಗೆ ಮೋಸ ಮಾಡಿರುವ ಬ್ಯಾಂಕ್ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಪ್ರಸನ್ನಗೌಡ, ಹೊಸಕೋಟೆ ಬಸವರಾಜು, ನೇತ್ರಾವತಿ, ಎ.ಎಲ್.ಕೆಂಪೇಗೌಡ ಇನ್ನಿತರರಿದ್ದರು.