ಜಿಲ್ಲೆ

ಹೆಸ್ಕಾಂ ವಿರುದ್ಧ ಗುತ್ತಲ, ನೀರಲಗಿಯಲ್ಲಿ ರೈತರ ಪ್ರತಿಭಟನೆ

ಗುತ್ತಲ: ಅಸಮರ್ಪಕ ವಿದ್ಯುತ್ ಪೂರೈಸುತ್ತಿರುವ ಹೆಸ್ಕಾಂ ವಿರುದ್ಧ ಗುತ್ತಲ ಹಾಗೂ ನೀರಲಗಿ ವಿದ್ಯುತ್ ವಿತರಣಾ ಕೇಂದ್ರ ಆವರಣದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ವಿತರಣೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡದೇ ನಿರಂತರ 7 ತಾಸು 3 ಫೇಸ್​ವಿದ್ಯುತ್ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಅಸಮರ್ಪಕ ವಿದ್ಯತ್ ಪೂರೈಕೆ ಮತ್ತು ಪದೇಪದೆ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಬೆಳೆಗಳಿಗೆ ಸರಿಯಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ನೀಡಿದ ಸಂದರ್ಭದಲ್ಲೂ ಪದೇಪದೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಹೊಲದಲ್ಲಿ ವಿದ್ಯುತ್ ಪರಿವರ್ತಕಗಳು ಹಾನಿಯಾಗುತ್ತಿವೆ. ಪಂಪ್​ಸೆಟ್​ಗಳು ಹಾಗೂ ಸ್ಟಾರ್ಟ್​ಗಳು ಸುಟ್ಟು ಹೋಗುತ್ತಿವೆ. ರೈತ ಸಮುದಾಯ ಆರ್ಥಿಕ ಹೊರೆಯನ್ನು ಅನುಭವಿಸುವಂತಾಗಿದೆ ಪ್ರತಿಭಟನಾಕಾರರು ಆರೋಪಿಸಿದರು.

ಗುತ್ತಲ ಹೆಸ್ಕಾಂ ಕಚೇರಿ:

ಕೂರಗುಂದ ಗ್ರಾಮದ ರೈತರು ಬೆಳಗ್ಗೆಯಿಂದಲೇ ಗುತ್ತಲ ಶಾಖಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ಆರಂಭಿಸಿದ್ದರು. ಈ ಮೊದಲು ಕೂರಗುಂದ ಗ್ರಾಮದ ಸುತ್ತಮುತ್ತಲ ಹೊಲಗಳಿಗೆ ಗುತ್ತಲ 110 ಕೆ.ವ್ಹಿ. ವಿದ್ಯುತ್ ವಿತರಣೆ ಕೇಂದ್ರದಿಂದ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಈಗ ಹೊನ್ನತ್ತಿ ಗ್ರಾಮದ ಕೇಂದ್ರದಿಂದ ಪೂರೈಕೆಯಾಗುತ್ತಿದೆ. ಆದರೆ, ಈ ಕೇಂದ್ರದಿಂದ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಅಲ್ಲದೆ, ರಾತ್ರಿ ಬದಲು ಹಗಲು ಹೊತ್ತಿನಲ್ಲೇ ಕರೆಂಟ್ ಪೂರೈಸಬೇಕು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗುತ್ತಲ, ಕೂರಗುಂದ, ನೀರಲಗಿ, ಬೆಳವಿಗಿ, ಮೇವುಂಡಿ, ಗುಯಿಲಗುಂದಿ, ತೆರೇದಹಳ್ಳಿ, ಕೆರೆಕೊಪ್ಪ, ಗುಡಸಲಕೊಪ್ಪ, ಹಾಲಗಿ ಮರೋಳ,ಹಾಗೂ ಕೂರಗುಂದ ಗಾಮದ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.